ಯುಗಾದಿ ಮೆರವಣಿಗೆ ವೇಳೆ ಕಲ್ಲು ತೂರಾಟ: ನಾಲ್ವರು ಪೊಲೀಸ್‌ ಅಧಿಕಾರಿಗಳು ಸೇರಿ 42 ಜನರಿಗೆ ಗಾಯ

ಏಪ್ರಿಲ್ 2, ಶನಿವಾರದಂದು ರಾಜಸ್ಥಾನದ ಕರೌಲಿಯಲ್ಲಿ ಧಾರ್ಮಿಕ ಮೆರವಣಿಗೆಯ ಭಾಗವಾಗಿ ನಡೆದ ಮೋಟಾರ್‌ ಸೈಕಲ್ ರ್ಯಾಲಿಯ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರಿಂದ ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಕನಿಷ್ಠ 42 ಜನರು ಗಾಯಗೊಂಡಿದ್ದಾರೆ.
ಹಿಂದೂ ಹೊಸ ವರ್ಷದ ಮೊದಲ ದಿನವಾದ ‘ನವ ಸಂವತ್ಸರ’ ಯುಗಾದಿ ಸಂದರ್ಭದಲ್ಲಿ ರ್ಯಾಲಿಯನ್ನು ಆಯೋಜಿಸಲಾಗಿತ್ತು.
ಘಟನೆಯ ನಂತರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು. ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ಕರೌಲಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಸೋಮವಾರ ರಾತ್ರಿಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಧಿಕಾರಿಗಳು ಈ ಪ್ರದೇಶದಲ್ಲಿ ಇಂಟರ್ನೆಟ್ ಸಹ ಸ್ಥಗಿತಗೊಳಿಸಿದ್ದಾರೆ.

ಕರ್ಫ್ಯೂ ವಿಧಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಕರೌಲಿಯ ಜಿಲ್ಲಾಧಿಕಾರಿ ರಾಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಹಲವೆಡೆ ಅಗ್ನಿಸ್ಪರ್ಶ ನಡೆದಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ನಿಯಂತ್ರಣದಲ್ಲಿದೆ ಎಂದು ರಾಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.

ಘಟನೆಯ ನಂತರ, ರಾಜಸ್ಥಾನದ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಕರೌಲಿಯಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಡಿಜಿಪಿ ಎಂಎಲ್ ಲಾಥರ್ ಅವರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ರಾಜಸ್ಥಾನ ರಾಜ್ಯಪಾಲರು ಜನತೆಗೆ ಮನವಿ ಮಾಡಿದ್ದಾರೆ.
ಏತನ್ಮಧ್ಯೆ, ಘಟನೆಗೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.
ಇದಕ್ಕೆ ಕಾಂಗ್ರೆಸ್ ಸರ್ಕಾರದ ಓಲೈಕೆ ನೀತಿಯೇ ಕಾರಣ. ಇದುವರೆಗೆ ಯಾವುದೇ ಬಂಧನವಾಗಿಲ್ಲ. ಹಿಂದೂ ಹೊಸ ವರ್ಷದಂದು ಆಯೋಜಿಸಲಾಗಿದ್ದ ಬೈಕ್ ರ್ಯಾಲಿ ವೇಳೆ ಇದು ಯೋಜಿತ ದಾಳಿ ಮಾಡಲಾಗಿದೆ ಎಂದು ಸತೀಶ್ ಪೂನಿಯಾ ಟ್ವೀಟ್ ಮಾಡಿದ್ದಾರೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement