ಬೆಂಗಳೂರು: ಇಲ್ಲಿನ ಜೆ.ಜೆ. ನಗರ ಎಂಬಲ್ಲಿ ನಡೆದ ಚಂದ್ರು ಕೊಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಈ ಮೊದಲಿನ ತಮ್ಮ ಹೇಳಿಕೆಯಿಂದ ಯೂಟರ್ನ್ ಹೊಡೆದಿದ್ದಾರೆ.
ಮೊದಲು ‘ಉರ್ದು ಮಾತನಾಡದಿದ್ದಕ್ಕೆ ಕೊಲೆ ಮಾಡಲಾಗಿತ್ತು ಎಂದು ಹೇಳಿದ್ದರು. ಆದರೆ ಹೇಳಿಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಈಗ ಬೈಕ್ ಟಚ್ ಆಗಿ ಗಲಾಟೆ ನಡೆದ ವೇಳೆ ಕೊಲೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ‘
ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣದ ಮಾಹಿತಿ ಆಧರಿಸಿ ನಾನು ಹೇಳಿಕೆ ನೀಡಿದ್ದೆ. ನಾನು ನೀಡಿರುವ ಹೇಳಿಕೆ ತಪ್ಪಾಗಿದೆ. ಇದೀಗ ಪೊಲೀಸರು ವಿಸ್ತೃತವಾದ ಮಾಹಿತಿ ನೀಡಿದ್ದಾರೆ. ಬೈಕ್ ಡಿಕ್ಕಿಯಾಗಿ ಗಲಾಟೆಯಾಗಿ ಚಂದ್ರುಗೆ ಚೂರಿ ಇರಿತ ಆಗಿದೆ. ಆಸ್ಪತ್ರೆಗೆ ಹೋಗುವಷ್ಟರಲ್ಲಿ ರಕ್ತಸ್ರಾವವಾಗಿ ಚಂದ್ರು ಸಾವನ್ನಪ್ಪಿದ್ದಾರೆ. ಈ ಹಿಂದೆ ನಾನು ನೀಡಿದ್ದ ಹೇಳಿಕೆ ತಪ್ಪಾಗಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಮೂಲಗಳ ಮಾಹಿತಿ ಆಧಾರವಾಗಿ ನಾನು ಹೇಳಿಕೆ ನೀಡಿದ್ದೆ. ನಾನು ಈ ಹಿಂದೆ ಹೇಳಿದಂತೆ ಯಾವುದೇ ಘಟನೆ ನಡೆದಿಲ್ಲ. ಉರ್ದು ಮಾತನಾಡದಿದ್ದಕ್ಕೆ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದೆ. ನನ್ನ ಹೇಳಿಕೆ ತಪ್ಪಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಗೃಹ ಸಚಿವರಿಗೆ ಬೆಳಿಗ್ಗೆ ಪೊಲೀಸರು ಚಂದ್ರು ಕೊಲೆ ಪ್ರಕರಣದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ಉರ್ದು ಮಾತನಾಡಲು ಬರದಿರುವುದಕ್ಕೆ ಕೊಲೆ ಮಾಡಲಾಗಿದೆ. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದೆ, ತನಿಖೆ ನಡೆಯುತ್ತಿದೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು. ಹೇಳಿಕೆ ನೀಡಿದ ಕೆಲವೇ ಸಮಯದ ನಂತರ ತಮ್ಮ ಮೊದಲಿನ ಹೇಳಿಕೆಗೆ ಯೂ ಟರ್ನ್ ಹೊಡೆದಿದ್ದಾರೆ ಹಾಗೂ ಇದು ಬೈಕ್-ಬೈಕ್ ಗುದ್ದಿಕೊಂಡಾಗ ಆದ ಗಲಾಟೆ ವೇಳೆ ಚಂದು ಅವರ ಕೊಲೆಯಾಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಆಕ್ರೋಶ..:
ಉರ್ದು ಮಾತನಾಡದಿದ್ದಕ್ಕೆ ಕೊಲೆ ಮಾಡಿದ್ದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿರುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರಗ ಜ್ಞಾನೇಂದ್ರ ಒಬ್ಬ ಅಸಮರ್ಥ ಗೃಹ ಸಚಿವರು. ಹರ್ಷ ಕೊಲೆ ಪ್ರಕರಣದಲ್ಲೂ ಇದೇ ರೀತಿ ಹೇಳಿಕೆ ನೀಡಿದ್ದರು. ಹರ್ಷ ವಿರುದ್ಧ ಕ್ರಿಮಿನಲ್ ಪ್ರಕರಣ ಇದೆ ಎಂದು ಹೇಳಿದ್ದರು. ನಂತರ ಕ್ರಿಮಿನಲ್ ಪ್ರಕರಣ ಇಲ್ಲ ಎಂದು ಹೇಳಿದ್ದಾರೆ. ಆರಗ ಜ್ಞಾನೇಂದ್ರಗೆ ಇಲಾಖೆ ನಿಭಾಯಿಸಲು ಬರುತ್ತಿಲ್ಲ. ಮೈಸೂರಿನ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಇದೇರೀತಿ ಬೇಜವಾಬ್ದಾರಿ ಹೇಳಿಕೆ ನೀಡಿದ್ದರು. ಇಂತಹವರು ಗೃಹ ಸಚಿವರಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಚ್‌ಡಿಕೆ ತರಾಟೆ
ಚಂದ್ರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಕ್ಕೊಂದು ಹೇಳಿಕೆ ನೀಡುತ್ತಿರುವ ಆರಗ ಜ್ಞಾನೇಂದ್ರ ಅವರು ಕಾಮಿಡಿ ರೋಲ್ ಮಾಡಲು ಗೃಹ ಸಚಿವರಾಗಿದ್ದಾರಾ? ಅಥವಾ ವಿಲನ್ ರೋಲ್ ಮಾಡುತ್ತೀದ್ದರೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದ್ದಾರೆ.
ಸಮಾಜದ ಶಾಂತಿ ಕದಡುವ ವೇಳೆ, ಗೃಹ ಸಚಿವರಿಗೆ ತಮ್ಮ ಸ್ಥಾನದ ಜವಾಬ್ದಾರಿ ಅರಿವಿಲ್ಲದಂತಾಗಿದೆ. ಇದರಲ್ಲಿ ಯಾವುದು ಸತ್ಯ ಎಂಬುದು ತಿಳಿಯದೇ ಮಂತ್ರಿಯೇ ತನಿಖೆಗೆ ಮುನ್ನ ತೀರ್ಪು ಕೊಟ್ಟಿದ್ದಾರೆ. ಹಿಂದೂ ಮುಸ್ಲಿಂ ಮಧ್ಯೆ ಕಂದಕ ತರುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ದೂರಿದ್ದಾರೆ
ನಿಮ್ಮ ಕಾಮೆಂಟ್ ಬರೆಯಿರಿ