ಹಣಕಾಸು ವ್ಯವಹಾರದಲ್ಲಿ ಲೆಕ್ಕ ತಪ್ಪಿದಕ್ಕೆ ಹಾಡಹಗಲೇ ಮಗನಿಗೆ ಬೆಂಕಿ ಹಚ್ಚಿದ ತಂದೆ…!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲೊಂದು ಅತ್ಯಂತ ಅಮಾನುಷ ಘಟನೆ ನಡೆದಿದ್ದು, ತಂದೆಯೇ ಮಗನಿಗೆ ಬೆಂಕಿ ಹಚ್ಚಿದ್ದಾನೆ…!
ಹಣಕಾಸು ಲೆಕ್ಕದಲ್ಲಿ ವ್ಯತ್ಯಾಸ ಬಂದಿದೆ ಎಂಬ ಕಾರಣಕ್ಕೆ ಸಿಟ್ಟಿನ ಭರದಲ್ಲಿ ವಿವೇಕವನ್ನೇ ಕಳೆದುಕೊಂಡ ತಂದೆ ತನ್ನ ಮಗನಿಗೇ ಬೆಂಕಿ ಹಚ್ಚಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮಗ ಅರ್ಪಿತ್(25) ಮೃತಪಟ್ಟಿದ್ದಾನೆ.

ಬೆಂಗಳೂರಿನ ಆಜಾದ್ ನಗರದಲ್ಲಿ ಈ ಘಟನೆ ನಡೆದಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್​ ಆಗಿದೆ . ಕಳೆದ ವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಅರ್ಪಿತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಈ ಘಟನೆ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ಎಂದು ಕೇಸ್ ದಾಖಲಿಸಿಕೊಂಡಿದ್ದಾರೆ. ಆಸ್ಪತ್ರೆ, ಸ್ಥಳೀಯರ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಸುರೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಸುರೇಂದ್ರ ದೊಡ್ಡ ದೊಡ್ಡ ಬಿಲ್ಡಿಂಗ್ ಪ್ಯಾಬ್ರಿಕೇಷನ್ ಬಿಜಿನೆಸ್ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ವ್ಯವಹಾರ ಹಾಗೂ ಲೆಕ್ಕದ ಜವಾಬ್ದಾರಿಯನ್ನು ಮಗನಿಗೆ ನೀಡಿದ್ದ. ಹಣದ ಲೆಕ್ಕದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಇದೇ ವಿಚಾರಕ್ಕೆ ಬಿಜಿನೆಸ್ ಮೆಟೀರಿಯಲ್ ಇಟ್ಟಿದ್ದ ಗೋದಾಮಿನಲ್ಲಿ ಕೆಲಸಗಾರರ ಮುಂದೆಯೇ ಅಪ್ಪ-ಮಗನ ಮಧ್ಯೆ ಏ.1ರಂದು ಮಧ್ಯಾಹ್ನ ಜಗಳ ನಡೆದಿತ್ತು. ಮಾತಿನ ಚಕಮಕಿ ವೇಳೆ ಸಿಟ್ಟಾದ ಅಪ್ಪ, ಗೋದಾಮು ಬಳಿಯ ಮುಖ್ಯರಸ್ತೆಯಲ್ಲಿ ಮಗನಿಗೆ ಥಿನ್ನರ್ ಎರಚಿ ಬೆಂಕಿ ಹಚ್ಚಿದ್ದಾನೆ.
ಬೆಂಕಿಯಿಂದ ಸುಟ್ಟು ನರಳಾಡುತ್ತಿದ್ದ ಮಗನನ್ನು ರಕ್ಷಿಸಿ ಕೂಡಲೇ ಪರಿಚಯಸ್ಥರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪೊಲೀಸರ ಮುಂದೆ ಅರ್ಪಿತ ಕೊಟ್ಟ ಹೇಳಿಕೆ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧಾರಿಸಿ ಚಾಮರಾಜಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅರ್ಪಿತ​ ಇಂದು(ಗುರುವಾರ) ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement