ಬೆಂಗಳೂರು: ೩೮ ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ, ಆರು ಜನರ ಬಂಧನ

ಬೆಂಗಳೂರು: ಡ್ರಗ್ಸ್ ಮಾರಾಟ ಹಾಗೂ ಸೇವನೆ ವಿರುದ್ಧ ಸಮರ ಸಾರಿರುವ ಪೊಲೀಸರು ಮೂವರು ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳೂ ಸೇರಿದಂತೆ ೬ ಮಂದಿಯನ್ನು ಬಂಧಿಸಿ ೩೮.೪೫ ಕೋಟಿ ರೂ.ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.
ಬಂಧಿತ ಅಂತಾರಾಜ್ಯ ಮೂವರು ಡ್ರಗ್ಸ್ ಪೆಡ್ಲರ್‌ಗಳಿಂದ ೩೭ ಕೋಟಿ ಮೌಲ್ಯದ ೬.೫ ಕೆಜಿ ಎಂಡಿಎಂಎ, ೩೦೦ ಗ್ರಾಂ ಪ್ರೊಮೊಡಲ್, ೭೫ ಗ್ರಾಂ ಕೊಕೇನ್, ೭೬ ಮೆತಾಗೊಲೊನ್‌ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಹಾರಾಷ್ಟ್ರದ ಬೈದಂದರ್ ರಜಿತ್ ಭಾನುಗುಪ್ತ (೨೪), ತಮಿಳುನಾಡಿನ ಕಾಂಚಿಪುರಂನ ಅಂದ್ರಾನ್ ಗೋಮ್ಸ್ (೫೯), ತಮಿಳುನಾಡಿನ ಗ್ರಾಂಟ್ ಐಲ್ಯಾಂಡ್‌ನ ರಾಜೇಶ್ (೩೫) ಅಂತಾರಾಜ್ಯ ಬಂಧಿತ ಡ್ರಗ್ಸ್ ಪೆಡ್ಲರ್‌ಗಳಾದರೆ, ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಸ್ಸಾದ ಸಮರಕರ (೨೨), ರಮೇಶ್ ಕೆಮುಂದಿ (೨೫), ಮಂಗಲ್‌ಹಿಸಾ (೨೦) ಬಂಧಿತ ಇತರರಾಗಿದ್ದಾರೆ. ಆರೋಪಿಗಳು ಎಚ್‌ಬಿಆರ್ ಲೇಔಟ್‌ನ ೫ನೇ ಹಂತದ ಅರಣ್ಯ ಕಚೇರಿ ಹಿಂಭಾಗ ಸೆಲೆಬ್ರಿಟಿಗಳು ಹಾಗೂ ಉದ್ಯಮಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದಾಗ ಇನ್ಸ್‌ಪೆಕ್ಟರ್ ಪ್ರಕಾಶ್ ಮತ್ತವರ ಸಿಬ್ಬಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

ಒಡಿಸ್ಸಾ ಮೂಲದ ಇನ್ನೂ ಮೂವರು ಆರೋಪಿಗಳಿಂದ ೧.೪೫ ಕೋಟಿ ರೂ. ಮೌಲ್ಯದ ೨೯೦ ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ನಾಗವಾರದ ಹಂದಿಜೋಗಿ ರುದ್ರಭೂಮಿ ಬಳಿಯ ಚಿಕ್ಕ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು ಅದರಲ್ಲಿ ೨೯೦ ಕೆಜಿ ಗಾಂಜಾವನ್ನು ಮೂಟೆಗಳಲ್ಲಿ ಶೇಖರಿಸಿಟ್ಟುಕೊಂಡಿದ್ದರು. ಆರೋಪಿಗಳು ಮಾರಾಟ ಮಾಡುತ್ತಿದ್ದ ಗಿರಾಕಿಗಳಿಂದ ಮಾಹಿತಿ ಪಡೆದು ಕೂಡಲೇ ಕಾರ್ಯಾಚರಣೆ ಕೈಗೊಂಡ ಗೋವಿಂದಪುರ ಪೊಲೀಸರು ದಾಳಿ ನಡೆಸಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಆರೋಪಿಗಳು ಒಡಿಸ್ಸಾದಿಂದ ರೈಲಿನಲ್ಲಿ ಗಾಂಜಾವನ್ನು ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ನಗರದಲ್ಲಿ ಶೇಖರಿಸಿ ಚಿಕ್ಕ ಪ್ಯಾಕೇಟ್‌ಗಳಾಗಿ ಕಟ್ಟಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದ ಅವರು, ಪೂರ್ವ ವಿಭಾಗದ ಡಿಸಿಪಿ ಡಾ. ಭೀಮಾಶಂಕರ್ ಗುಳೇದ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ತಂಡಕ್ಕೆ ನಗದು ಬಹುಮಾನ ಘೋಷಿಸಿದರು.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement