ವಿಜಯಪುರ: ಮಕ್ಕಳ  ಸಾಹಿತಿ ಶರಣಪ್ಪ ಕಂಚ್ಯಾಣಿ ವಿಧಿವಶ

ವಿಜಯಪುರ: ನಗರದ ನಿವೃತ್ತ ಶಿಕ್ಷಕ ಹಾಗೂ ಮಕ್ಕಳ ಹಿರಿಯ ಸಾಹಿತಿ ಶರಣಪ್ಪ ಕಂಚ್ಯಾಣಿ (92) ಬುಧವಾರ ವಿಧಿವಶರಾದರು.
ಮೃತರು ನಿವೃತ್ತ ಪ್ರಾಚಾರ್ಯ ಅರವಿಂದ ಕಂಚ್ಯಾಣಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಸೇರಿದಂತೆ ಐವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು- ಬಳಗವನ್ನು ಅಗಲಿದ್ದಾರೆ.
ಶರಣಪ್ಪ ಕಂಚ್ಯಾಣಿ ಅವರು ಮೂರು ದಿನಗಳ ಹಿಂದೆ ಮನೆಯ ಬಚ್ಚಲಕೋಣೆಯಲ್ಲಿ ಬಿದ್ದು, ತೊಡೆಯ ಮೂಳೆ ಮುರಿತದಿಂದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ನ್ಯುಮೋನಿಯಾ ಕಂಡು ಬಂದಿತ್ತು.

ಮೃತರ ಪ್ರಾರ್ಥಿವ ಶರೀರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗಿದ್ದು, ಅವರ ಇಚ್ಛೆಯಂತೆ, ಇಲ್ಲಿನ ಬಿಎಲ್’ಡಿಇ ಸಂಸ್ಥೆ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದೇಹವನ್ನು ಹಸ್ತಾಂತರ ಮಾಡಲಿದ್ದಾರೆ.
ಮಕ್ಕಳ ಸಾಹಿತಿ ಶರಣಪ್ಪ ಕಂಚ್ಯಾಣಿಯವರು ಮೂಲತಃ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದವರು. ಓದಿದ್ದು ಏಳನೇ ತರಗತಿಯವರೆಗೆ. ಪ್ರಾಥಮಿಕ ಶಾಲಾ ಶಿಕ್ಷಕರಾದ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 1988ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾದರು.

ಮಕ್ಕಳ ಮನೋವಿಕಾಸಕ್ಕೆ ತಕ್ಕಂತಹ ಗೀತೆಗಳನ್ನು ರಚಿಸಿದ್ದಾರೆ. ಹಳ್ಳಿಗಾಡಿನ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿನಃ ಬೇರೆ ರೀತಿಯ ಪುಸ್ತಕಗಳು ದೊರೆಯುತ್ತಿಲ್ಲವೆಂಬುದನ್ನು ಮನಗಂಡು ತಾವು ಬರೆದ ಪದ್ಯಗಳನ್ನು ಪ್ರಕಟಿಸಲು ತಮ್ಮದೇ ‘ಗ್ರಾಮೀಣ ಪ್ರತಿಭಾ ಪ್ರಕಾಶನ’ ದ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು.
ಶರಣಪ್ಪ‌ ಕಾಂಚ್ಯಾಣಿ ಅವರು ಕಳೆದ ಐವತ್ತು ವರ್ಷಗಳಿಂದ ಮಕ್ಕಳ ಸಾಹಿತ್ಯ ಕೈಂಕರ್ಯದಲ್ಲಿ ತೊಡಗಿದ್ದರು. ಮಕ್ಕಳ ಸಾಹಿತ್ಯ, ಕವನ, ಮಕ್ಕಳ ಕಥೆ, ಖಂಡ ಕಾವ್ಯ, ಚರಿತ್ರೆ ಸೇರಿದಂತೆ ಸಾಹಿತ್ಯ ಕೃಷಿ ಮಾಡಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಜ್ಯ ಹಾಗೂ ರಾಷ್ಟಗರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದರು.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement