ಕುಮಟಾ: ಕೇವಲ ಅರ್ಜಿ ಪಡೆದ್ರೆ ಸಮಸ್ಯೆ ಬಗೆಹರಿಯಲ್ಲ, ಅಧಿಕಾರಿಗಳು ಹಳ್ಳಿಯಲ್ಲಿದ್ದು ಸಮಸ್ಯೆ ಅರಿತರೆ ಬಗೆಹರಿಯುತ್ತದೆ-ಸಚಿವ ಅಶೋಕ

ಕುಮಟಾ; ಸಮಸ್ಯೆ ಎನ್ನುವುದು ಹಳ್ಳಿಯಲ್ಲಿದೆ. ಹರಿಜನ ಕೇರಿಯಲ್ಲಿ, ಮೀನುಗಾರರ ಸಮುದಾಯದಲ್ಲಿ ಸಮಸ್ಯೆಯಿದೆ. ಹಳ್ಳಿಯ ಹಿಂದುಳಿದ, ಬಡವರ ಅಭಿವೃದ್ಧಿಯಾಗಬೇಕು. ಕೇವಲ ಸಮಸ್ಯೆಗಳ ಬಗ್ಗೆ ಅರ್ಜಿ ಪಡೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಹಳ್ಳಿಯಲ್ಲಿ ಹೆಚ್ಚುಕಾಲ ಇರಬೇಕು. ಜಿಲ್ಲಾಧಿಕಾರಿ ಸಮೇತ ಅಧಿಕಾರಿಗಳು ಹಳ್ಳಿಯಲ್ಲಿದ್ದು ಸಮಸ್ಯೆ ಅರಿತುಕೊಂಡರೆ ಬಗೆಹರಿಯುತ್ತದೆ. ಅಲ್ಲಿಯ ಸಮಸ್ಯೆಯನ್ನು ಸ್ಥಳದಲ್ಲೇ ತಿರ್ಮಾನ ಮಾಡುವ ಉದ್ದೇಶ ಗ್ರಾಮ ವಾಸ್ತವ್ಯದ ಉದ್ದೇಶವಾಗಿದೆ ಎಂದು ರಾಜ್ಯ ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರ ಆಸ್ತಿಗೆ ಸಂಬಂಧಿಸಿದ್ದ ೪ ಕೋಟಿಗೂ ಹೆಚ್ಚು ದಾಖಲೆಗಳನ್ನು ಜನರಿಗೆ ನೀಡಿದ್ದೇವೆ. ಎಷ್ಟೋ ಜನರಿಗೆ ತಮ್ಮ ಜಮೀನಿನ ಮಾಹಿತಿಯೇ ಇಲ್ಲ. ಇದರಿಂದ ಜನರ ಸಮಸ್ಯೆ ಹಾಗೆಯೇ ಉಳಿದಿದೆ. ಇನ್ನೊಂದು ವಾರದಲ್ಲಿ ಕುಟುಂಬದ ಆಸ್ತಿ ಹಂಚಿಕೆಯನ್ನು ಅವರೇ ಮಾಡಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ. ತಾಂಡಾ, ಹಟ್ಟಿ ಇತ್ಯಾದಿಯನ್ನು ಗ್ರಾಮ ಎಂದು ಮಾಡುತ್ತಿದ್ದೇವೆ. ಇದರಿಂದ ಮಾತ್ರ ಜನರಿಗೆ ಸೌಲಭ್ಯ ಸಿಗಲು ಸಾಧ್ಯವಿದೆ ಎಂದರು.

ಪ್ರತಿಪಕ್ಷದವರಿಗೆ ಆಪಾದನೆ ಮಾಡುವುದು ಬಿಟ್ಟರೆ ಮತ್ತೇನೂ ಇಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸುಮಾರು ೩ ಸಾವಿರ ಕೋಟಿ ರೂ.ಗಳಷ್ಟು ಹಣವನ್ನು ರೈತರಿಗೆ ನೀಡಿದ್ದೇವೆ. ೪ ದಿನದಲ್ಲಿ ಮಾರ್ಗ ಸೂಚಿ ಬೆಲೆಯನ್ನು ನಿರ್ಧಾರ ಮಾಡುತ್ತೇವೆ. ವಾರ್ಷಿಕ ವೃದ್ಧಾಪ್ಯ ಇತ್ಯಾದಿ ಹಣವನ್ನು ತಿಂಗಳೊಳಗೆ ನೀಡುತ್ತೇವೆ. ಟೋಲ್ ಫ್ರೀ ಯೋಜನೆ ಮೂಲಕ ವಿವಿಧ ಯೋಜನೆಗಳನ್ನು ೭೨ ತಾಸಿನಲ್ಲಿ ರೈತರ ಖಾತೆಗೆ ಬರುವ ಯೋಜನೆ ತರುತ್ತಿದ್ದೇವೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

ಗ್ರಾಮ ವಾಸ್ತವ್ಯ ಮಾಡುವ ಹಳ್ಳಿಗೆ ೧ ಕೋಟಿ ವಿಶೇಷ ಅನುದಾನ ನೀಡುತ್ತಿವೆ. ಇದನ್ನು ಹಳ್ಳಿಯ ಜನರೇ ತಮ್ಮ ಊರಿನ ಅಭಿವೃದ್ಧಿಗೆ ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ದಿನಕರ ಶೆಟ್ಟಿ, ಗ್ರಾಮ ಪಂಚಾಯತ ಸದಸ್ಯ ಎಂ.ಎಂ. ಹೆಗಡೆ ಹಾಗೂ ಜಿಲ್ಲಾಧಿಕಾರಿ, ತಹಶೀಲ್ದಾರ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement