ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 50 ಸನ್ಯಾಸಿಗಳಿಂದ ಸ್ಪರ್ಧೆ, ಭಟ್ಕಳದಲ್ಲಿ ನನ್ನಿಂದಲೇ ಮೊದಲು ಪ್ರಯೋಗಕ್ಕೆ ಚಿಂತನೆ : ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಭಟ್ಕಳ (ಉತ್ತರ ಕನ್ನಡ) : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಂದ ಪ್ರೇರಣೆ ಪಡೆದಿರುವ ಸುಮಾರು 50ಕ್ಕೂ ಹೆಚ್ಚು ಸನ್ಯಾಸಿಗಳು ಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ ಎಂದು ಉಜಿರೆ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೊಳೆ ಹಳೆಕೋಟೆ ಶ್ರೀಕ್ಷೇತ್ರ ಹನುಮಂತ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಸುನೀಲ ನಾಯ್ಕ, ಮಾಜಿ ಶಾಸಕರಾದ ಜೆ.ಡಿ.ನಾಯ್ಕ, ಆರ್.ಎನ್.ನಾಯ್ಕ ಮೊದಲಾದವರ ಉಪಸ್ಥಿತಿಯಲ್ಲಿ ಮಾತನಾಡಿದ ಅವರು ಈಗಾಗಲೇ ಈ ಬಗ್ಗೆ ನಮ್ಮಲ್ಲಿ ಹಲವು ಚರ್ಚೆಗಳು ನಡೆದಿವೆ. ಸನಾತನ ಹಿಂದೂ ಧರ್ಮವನ್ನು ತಿದ್ದಬೇಕು. ಹಾಗಾಗಿ ರಾಮರಾಜ್ಯ ಕಲ್ಪನೆಯಲ್ಲಿ ಭಗವದ್ಗೀತೆಯನ್ನು ಪಕ್ಷದ ಚಿಹ್ನೆಯನ್ನಾಗಿ ಇಟ್ಟುಕೊಂಡು ಭಟ್ಕಳದಿಂದ ಪ್ರಾಯೋಗಿಕವಾಗಿ ನಾನು ಸ್ಪರ್ಧಿಸುವ ಯೋಚನೆಯಲ್ಲಿದ್ದೇನೆ. ಭಟ್ಕಳದಲ್ಲಿ ನಾನೇ ಈ ಪ್ರಯೋಗ ಆರಂಭಿಸಬೇಕು ಎಂಬ ಚಿಂತನೆಯಿದೆ. ನಾನು ಸ್ಪರ್ಧೆ ಮಾಡಿದರೆ ಉಳಿದವರು ಹಿಂದೆ ಸರಿಯುತ್ತಾರೆಂಬ ವಿಶ್ವಾಸವಿದೆ  ಎಂದು ತಿಳಿಸಿದರು.
ಶಾಸಕಾಂಗದ ಸಮಗ್ರ ಬದಲಾವಣೆಗಾಗಿ, ರಾಜ್ಯದಲ್ಲಿ ಸನ್ಯಾಸಿಗಳು ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

ಇಂದಿನ ಕಾಲದಲ್ಲಿ ರಾಜಕೀಯಕ್ಕೆ ಬರುವುದೇ ಪ್ರಚಾರಕ್ಕಾಗಿ, ಹಣಕ್ಕಾಗಿ, ಸುಖಭೋಗಕ್ಕಾಗಿ ಎಂಬಂತಾಗಿದೆ. ಜನಪ್ರತಿನಿಧಿಗಳು ಪ್ರಜೆಗಳನ್ನ ತಮ್ಮ ಮಕ್ಕಳಂತೆ ಕಾಣುವ ಕೆಲಸವಾಗಬೇಕು. ಅದಕ್ಕೆ ನಾವು ಸನ್ಯಾಸಿಗಳು ತಯಾರಾಗಿದ್ದೇವೆ.ಉತ್ತರಾಖಂಡದ ನಾಗಾ ಸಾಧುಗಳ ಜುನಾ ಅಖಾಡದಲ್ಲಿ ನಾನೂ ಒಬ್ಬ ಪಂಥನಿದ್ದೇನೆ. ಸುಮಾರು 5 ಲಕ್ಷ ಸಾಧು- ಸಂತರುಗಳಲ್ಲಿ ನಾನೂ ಒಬ್ಬ. ನಾವು ಎರಡು- ಮೂರು ತಿಂಗಳಿಗೆ ಕುಳಿತು ಮಾತನಾಡುತ್ತೇವೆ. ವಿಧಾನಸಭೆಯಲ್ಲಿ ಮಾರ್ಕೆಟ್‌ನಲ್ಲಿ ಗಲಾಟೆ ಆದಂತೆ ಆಗುತ್ತದೆ. ರಾಜ್ಯಾಂಗದ ಪರಿಕಲ್ಪನೆ ಇದೆಯೇ ಇಲ್ಲವೋ ಗೊತ್ತಾಗುವುದಿಲ್ಲ. ರಾಜ್ಯಾಂಗ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಆಗಬೇಕು. ಹೀಗಾಗಿ ನಾವು ಸನ್ಯಾಸಿಗಳು ತಯಾರಾಗಿದ್ದೇವೆ ಎಂದರು.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement