ತಿರುವನಂತಪುರಂ: ಮಲಯಾಳಂ ನಟ ದಿಲೀಪ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ತನಿಖಾಧಿಕಾರಿಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ ಪೊಲೀಸರು ಮಲಯಾಳಂ ನಟ ದಿಲೀಪ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.
ಮಂಗಳವಾರ ನ್ಯಾಯಮೂರ್ತಿ ಜಿಯಾದ್ ರೆಹಮಾನ್ ಈ ಕುರಿತು ತೀರ್ಪು ಪ್ರಕಟಿಸಿದರು ಹಾಗೂ ಅರ್ಜಿಯನ್ನು ವಜಾಗೊಳಿಸಿದರು.ಮಲಯಾಳಂ ಚಿತ್ರರಂಗವೇ ಕೇರಳ ಹೈಕೋರ್ಟ್ ತೀರ್ಪಿಗಾ ಎದುರು ನೋಡುತ್ತಿತ್ತು. ಮಾರ್ಚ್ 31ರಂದು ಪ್ರಕರಣದ ತೀರ್ಪು ಕಾಯ್ದಿರಿಸಿದ್ದ ಕೋರ್ಟ್, ತೀರ್ಪಿಗೂ ಮೊದಲು ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿತ್ತು.
2017ರಲ್ಲಿ ನಟಿ ಮೇಲೆ ದೌರ್ಜನ್ಯ ನಡೆಸಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರನ್ನು ಹತ್ಯೆ ಮಾಡಲು ನಟ ದಿಲೀಪ ಸಂಚು ರೂಪಿಸಿದ್ದಾರೆ ಎಂದು ಕೇರಳ ಕ್ರೈಂ ಬ್ರಾಂಚ್ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದರು. ಈ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ದಿಲೀಪ್ ಹೈಕೋರ್ಟ್ ಮೊರೆ ಹೋಗಿದ್ದರು. ತನ್ನ ವಿರುದ್ಧ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ತನ್ನ ಕುಟುಂಬದ ಕೆಲವು ಸದಸ್ಯರೇ ಪಿತೂರಿ ಮಾಡಿ ಇಂತಹ ಎಫ್‌ಐಆರ್ ದಾಖಲು ಮಾಡಿಸಿದ್ದಾರೆ, ಇದನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ಅರ್ಜಿಯಲ್ಲಿ ಮನವಿ ಮಾಡಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ