ಹುಬ್ಬಳ್ಳಿ: ಮಧ್ಯಾಹ್ನವಷ್ಟೇ ಅಜ್ಞಾತ ಸ್ಥಳದಿಂದ ವೀಡಿಯೋ ಮೂಲಕ ಪ್ರತ್ಯಕ್ಷವಾಗಿದ್ದ ಹುಬ್ಬಳ್ಳಿ ಗಲಭೆಯ ಮಾಸ್ಟರ್ಮೈಂಡ್ ಆರೋಪಿ ವಾಸಿಂ ಪಠಾಣ್, ವೀಡಿಯೋ ರಿಲೀಸ್ ಮಾಡಿದ ಕೆಲವೇ ತಾಸುಗಳಲ್ಲಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.
ಗಲಭೆಗೆ ಪ್ರಚೋದನೆ ನೀಡಿದ್ದ ಇಲ್ಲಿನ ಮಂಟೂರ ರಸ್ತೆಯ ಮಿಲ್ಲತ್ ನಗರ ನಿವಾಸಿ ವಾಸಿಂ ಪಠಾಣ ಎಂಬಾತನನ್ನು ವಶಕ್ಕೆ ಪಡೆದು, ಹಳೇ ಹುಬ್ಬಳ್ಳಿ ಠಾಣೆಗೆ ಕರೆದುಕೊಂಡು ಬರಲಾಗಿದೆ ಎಂದು ತಿಳಿದುಬಂದಿದೆ. ಗಲಭೆ ನಡೆದ ದಿನ ಪೊಲೀಸರ ಜತೆ ವಾಗ್ವಾದಕ್ಕಿಳಿದಿದ್ದ ಎಐಎಮ್ಐಎಮ್ ಮುಖಂಡ ಮಹಮ್ಮದ್ ಆರಿಫ್ ಎಂಬಾತನನ್ನು ಪೊಲೀಸರು ಇದಕ್ಕೂ ಮೊದಲು ವಶಕ್ಕೆ ಪಡೆದ್ದರು.
ಇಂದು, ಗುರುವಾರ ಬೆಳಿಗ್ಗೆ ವಾಸಿಂ ವೀಡಿಯೋ ರಿಲೀಸ್ ಮಾಡುತ್ತಿದ್ದಂತೆ ಮುಂಬೈಗೆ ತೆರಳಿದ್ದ ಹುಬ್ಬಳ್ಳಿ ಕೇಶ್ವಾಪುರ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ ಹಾಗೂ ಇನ್ಸ್ಪೆಕ್ಟರ್ ಅಲ್ತಾಫ್ ತಂಡವು ಕಾರ್ಯಾಚರಣೆ ನಡೆಸಿ ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿ, ವಿಮಾನದ ಮೂಲಕ ಬೆಳಗಾವಿಗೆ ಕರೆತಂದು ಅಲ್ಲಿಂದ ಹುಬ್ಬಳ್ಳಿಗೆ ಕರೆತರಲಾಗಿದೆ. ಈಗ ಹಳೇಹುಬ್ಬಳ್ಳಿ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ವಾಸಿಂ ಈ ಹಿಂದೆ ಲಾರಿ ಚಾಲಕನಾಗಿದ್ದ. ಈಗ ಜಿಮ್ ನಡೆಸಿಕೊಂಡಿದ್ದಾನಂತೆ ಇತ್ತೀಚೆಗೆ ಮೌಲ್ವಿ ತರ ಬಟ್ಟೆ ಹಾಕಿಕೊಂಡು ಓಡಾಡುತಿದ್ದ. ಅಲ್ಲದೇ ತನ್ನದೇ ಆದ ಬೆಂಬಲಿಗರ ಗುಂಪು ಕಟ್ಟಿಕೊಂಡು ತಿರುಗಾಡುತ್ತಿದ್ದ ಎಂದು ತಿಳಿದು ಬಂದಿದೆ. ಪ್ರಕರಣದ ಮತ್ತಿಬ್ಬರು ಪ್ರಮುಖ ಆರೋಪಿಗಳನ್ನು ವಶಕ್ಕೆ ಪಡೆದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆತರಲಾಗಿದೆ ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ