ನಮಗೆ ಪಾಠ ಮಾಡಬೇಡಿ: ಅಬು ಸಲೇಂ ಪ್ರಕರಣದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್

ನವದೆಹಲಿ: ತನಗೆ 2017ರಲ್ಲಿ ವಿಧಿಸಿದ್ದ ಜೀವಾವಧಿ ಶಿಕ್ಷೆ ಹಸ್ತಾಂತರ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿ 1993ರ ಬಾಂಬೆ ಸ್ಫೋಟದ ಅಪರಾಧಿ ಅಬು ಸಲೇಂ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಗೃಹ ಕಾರ್ಯದರ್ಶಿ ಸಲ್ಲಿಸಿದ ಅಫಿಡವಿಟ್, ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ.
ಅಫಿಡವಿಟ್ ಸಂಪೂರ್ಣ ಅತಿರೇಕದಿಂದ ಕೂಡಿದ್ದು ನ್ಯಾಯಾಂಗಕ್ಕೆ ಪಾಠ ಮಾಡಲು ಹೊರಟಂತಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ. ಎಂ. ಸುಂದರೇಶ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಅಪೀಲನ್ನು ನಾವು ನಿರ್ಧರಿಸಬೇಕು ಎಂದು ಗೃಹ ಕಾರ್ಯದರ್ಶಿ ನಮಗೆ ಹೇಳುವಂತೆ ತೋರುತ್ತಿದೆ. ನಮಗೆ ಹೇಳಬೇಕಾಗಿರುವುದು ನೀವಲ್ಲ. ನಮಗೆ ಪಾಠ ಮಾಡಬೇಡಿ.  ದಯವಿಟ್ಟು ಇದನ್ನು ಅರ್ಥಮಾಡಿಕೊಳ್ಳಿ. ನಾವೇನು ​​ಮಾಡಬೇಕೋ ಅದನ್ನು ಮಾಡುತ್ತೇವೆ. ಅಫಿಡವಿಟ್ ಸಲ್ಲಿಸಲು ಎರಡು ಬಾರಿ ಅವಕಾಶ ಕೇಳಿದ ನಂತರ ಅವರು ನಮಗೆ ಏನು ಮಾಡಬೇಕೆಂದು ಹೇಳಬಾರದು. ನಾನಿದನ್ನು ಸಲೀಸಾಗಿ ತೆಗೆದುಕೊಳ್ಳುವುದಿಲ್ಲ ಎಂದು ನ್ಯಾ. ಕೌಲ್ ಹೇಳಿದರು.
ವಿಚಾರಣೆ ಎದುರಿಸುವ ಸಲುವಾಗಿ ಸಲೇಂನನ್ನು ಹಸ್ತಾಂತರಿಸಿದರೆ ಆತನಿಗೆ ಗಲ್ಲುಶಿಕ್ಷೆ ವಿಧಿಸುವುದಿಲ್ಲ ಅಥವಾ 25 ವರ್ಷಗಳಿಗೂ ಹೆಚ್ಚಿನ ಅವಧಿಯವರೆಗೆ ಜೈಲು ಶಿಕ್ಷೆಗೆ ಗುರಿಪಡಿಸುವುದಿಲ್ಲ ಎಂದು ಪೋರ್ಚುಗಲ್ ಸರ್ಕಾರಕ್ಕೆ ಭಾರತ ಸರ್ಕಾರ ನೀಡಿದ ಭರವಸೆಯ ಕುರಿತು ಕೇಂದ್ರ ಸರ್ಕಾರದ ನಿಲುವೇನು ಎಂದು ತಿಳಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು. ಅದಕ್ಕೆ ಪ್ರತಿಕ್ರಿಯೆಯಾಗಿ ಗೃಹ ಕಾರ್ಯದರ್ಶಿಗಳು ಅಫಿಡವಿಟ್‌ ಸಲ್ಲಿಸಿದ್ದರು.
ಪೋರ್ಚುಗಲ್‌ಗೆ ನೀಡಿದ ಭರವಸೆಗೆ ತಾನು ಬದ್ಧವಾಗಿದ್ದು ಸೂಕ್ತ ಸಮಯದಲ್ಲಿ ಅದನ್ನು ಪಾಲಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತು. ಆದರೆ ಸೇಲಂ ಸಲ್ಲಿಸಿದ ಮನವಿ ಅಕಾಲಿಕವಾದುದು ಎಂದು ಅದು ಹೇಳಿತ್ತು.

ಪ್ರಮುಖ ಸುದ್ದಿ :-   ಸ್ಕೂಟಿ ಮೇಲೆ ಹತ್ತಿದ ಬ್ಯಾಲೆನ್ಸ್ ತಪ್ಪಿ ಹಿಂದೆ ಬರುತ್ತಿದ್ದ ಟ್ರಕ್ ; ಮುಂದೇನಾಯ್ತೆಂದರೆ...

ಇದೇ ವೇಳೆ ಅಫಿಡವಿಟ್‌ನಲ್ಲಿ“ಗೌರವಾನ್ವಿತ ನ್ಯಾಯಾಲಯವು ಪ್ರಕರಣದ ಅರ್ಹತೆಯ ಆಧಾರದಲ್ಲಿ ಮೇಲ್ಮನವಿಯನ್ನು ನಿರ್ಧರಿಸಬಹುದು” ಎಂಬ ಕೋರಿಕೆ ಇರಿಸಿದ್ದು ನ್ಯಾಯಾಲಯಕ್ಕೆ ಸಿಟ್ಟು ತರಿಸಿತು. “ಏನು ಮಾಡಬೇಕು ಅಥವಾ ಮಾಡಬಾರದು ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ” ಎಂದು ಪೀಠ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು.
ಹಲವು ಅವಕಾಶಗಳನ್ನು ತೆಗೆದುಕೊಂಡ ಬಳಿಕವೂ ತಾನು ಮಾಡಬೇಕಾದ ಕರ್ತವ್ಯದ ಬಗ್ಗೆ ನಿಲುವು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಸರ್ಕಾರದ ಹಿರಿಯ ಹುದ್ದೆಯಲ್ಲಿರುವವರಿಗೆ ಶೋಭೆ ತರುವುದಿಲ್ಲ ಎಂದು ನ್ಯಾಯಾಲಯ ಎಚ್ಚರಿಸಿತು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement