
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎರಡನೇ ಹಂತದ ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ಹಾಗೂ ವೆಲ್ಲಾರ ಜಂಕ್ಷನ್‌ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ನಮ್ಮ ಮೆಟ್ರೊ ರೈಲು ಮಾರ್ಗದಲ್ಲಿ ಕಾಮಗಾರಿ ನಡೆಸಲು ಒಟ್ಟು 1,342 ಮರಗಳನ್ನು ಕಡಿಯಲು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (ಬಿಎಂಆರ್‌ಸಿಎಲ್) ಬುಧವಾರ ಕರ್ನಾಟಕ ಹೈಕೋರ್ಟ್ ಅನುಮತಿಸಿದೆ.

ಮರಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಬೆಂಗಳೂರು ಪರಿಸರ ಟ್ರಸ್ಟ್ ಮತ್ತು ಪರಿಸರವಾದಿ ಟಿ ದತ್ತಾತ್ರೇಯ ದೇವರೆ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಎಲ್ಲರ ವಾದವನ್ನು ಆಲಿಸಿದ ಪೀಠವು ಬಿಎಂಆರ್‌ಸಿಎಲ್‌ಗೆ ಮೆಟ್ರೊ ಮಾರ್ಗದಲ್ಲಿ ಮರ ತೆರವು ಮತ್ತು ಸ್ಥಳಾಂತರಕ್ಕೆ ಅನುಮತಿಸಿತು. ಅಲ್ಲದೇ, ಮೆಟ್ರೊ ಕಾಮಗಾರಿಗೆ ಅಡೆತಡೆಯಿಂದಾಗಿ ಬಿಎಂಆರ್‌ಸಿಎಲ್‌ಗೆ ಪ್ರತಿ ದಿನ ನಾಲ್ಕು ಕೋಟಿ ನಷ್ಟವಾಗುತ್ತಿದೆ ಎಂಬ ವಿಚಾರವನ್ನು ಆದೇಶದಲ್ಲಿ ದಾಖಲಿಸಿ, ವಿಚಾರಣೆಯನ್ನು ಬೇಸಿಗೆ ರಜೆ ನಂತರ ನಡೆಸುವುದಾಗಿ ಮುಂದೂಡಿತು.
1,342 ಮರಗಳ ಕಡಿತ, 163 ಮರಗಳ ಸ್ಥಳಾಂತರ
ಕಸ್ತೂರಿ ನಗರ ಮತ್ತು ಕೆಂಪಾಪುರ ಹೊರವರ್ತುಲ ರಸ್ತೆ ನಡುವೆ ಎರಡನೇ ಹಂತದ ನಮ್ಮ ಮೆಟ್ರೊ ಕಾಮಗಾರಿಗಾಗಿ 1,334 ಮರಗಳನ್ನು ಕಡಿಯಲು, 160 ಸ್ಥಳಾಂತರಿಸಲು, 26 ಮರಗಳನ್ನು ಉಳಿಸಿಕೊಳ್ಳಲು ನ್ಯಾಯಾಲಯ ಒಪ್ಪಿದೆ. ಹಾಗೆಯೇ, ವೆಲ್ಲಾರ ಜಂಕ್ಷನ್‌ನಿಂದ ರಾಷ್ಟ್ರೀಯ ಮಿಲಿಟರಿ ಶಾಲೆಯ ನಡುವಿನ ಅಂಡರ್‌ಗ್ರೌಂಡ್‌ನ ನಮ್ಮ ಮೆಟ್ರೊ ರೈಲು ಕಾಮಗಾರಿಗಾಗಿ 8 ಮರಗಳನ್ನು ಕಡಿಯಲು ಹಾಗೂ 2 ಮರಗಳನ್ನು ಹಾಗೆ ಉಳಿಸಿಕೊಳ್ಳಲು ಅನುಮತಿ ನೀಡಿದೆ. ಒಟ್ಟಾರೆ 1,342 ಮರಗಳನ್ನು ಕಡಿಯಲು, 163 ಮರಗಳ ಸ್ಥಳಾಂತರ ಮತ್ತು 28 ಮರಗಳನ್ನು ಹಾಗೆ ಉಳಿಸಿಕೊಳ್ಳಲು ಕೋರಿ ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಸಲ್ಲಿಸಿದ್ದ ಎರಡು ಮಧ್ಯಂತರ ಮನವಿಗಳಿಗೆ ಹೈಕೋರ್ಟ್ ಅನುಮತಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ