ಪಿಎಸ್‌ಐ ನೇಮಕಾತಿ ಪರೀಕ್ಷಾ ಹಗರಣ: ಅಭ್ಯರ್ಥಿಗಳಿಂದ ೬೦ ಲಕ್ಷ ರೂ. ವಸೂಲಿ, ಒಡಿಶಾದಲ್ಲಿ ಬ್ಲೂ ಟೂತ್‌ ಖರೀದಿ…!?

ಬೆಂಗಳೂರು: ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹುದ್ದೆಗಳ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆಯನ್ನು ತೀವ್ರ ಗೊಳಿಸಿರುವ ಸಿಐಡಿ ಅಧಿಕಾರಿಗಳು ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಬಳಸುತ್ತಿದ್ದ ಬ್ಲೂ ಟೂತ್ ಅನ್ನು ಒಡಿಶಾದಲ್ಲಿ ಖರೀದಿಸಿರುವುದನ್ನು ಪತ್ತೆಹಚ್ಚಿದ್ದಾರೆ ಹಾಗೂ ಅಭ್ಯರ್ಥಿಗಳಿಗೆ ಮ್ಯಾಕ್ರೋ ಬ್ಲೂ ಟೂತ್, ಮೈಕ್ರೋ ಡಿವೈಸ್ ಬಳಸಿ ಉತ್ತರ ಹೇಳಲು ಆರೋಪಿಗಳು ನುರಿತ ತಂತ್ರಜ್ಞರ ತಂಡ ಬಳಕೆ ಮಾಡಿರುವುದನ್ನು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು ತಿಳಿದುಬಂದಿದೆ.

ಅಕ್ರಮದಲ್ಲಿ ಭಾಗಿಯಾಗಿದ್ದವರೆಲ್ಲ ಬ್ಲೂಟೂತ್ ಬಳಸಿ ಪರೀಕ್ಷೆ ಎದುರಿಸಿರುವುದು ತನಿಖೆಯಿಂದ ಬಯಲಾಗಿದೆ.
ಅಭ್ಯರ್ಥಿಗಳು ಬಳಸಿದ ಬ್ಲೂ ಟೂತ್‌ಗಳನ್ನು ಒಡಿಶಾದಲ್ಲಿ ಖರೀದಿ ಮಾಡಲಾಗಿದೆ ಎನ್ನಲಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ ಒಂದೇ ಬಾರಿ ೫೦ಕ್ಕೂ ಅಧಿಕ ಬ್ಲೂ ಟೂತ್ ಗಳನ್ನು ಖರಿದಿಸಿರುವುದನ್ನು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಕೇಂದ್ರಕ್ಕೆ ಪ್ರವೇಶಸಿವ ಮುನ್ನ ಬ್ಲೂಟೂತ್ ಡಿವೈಸ್ ಅನ್ನು ಒಳ ಉಡುಪಿನಲ್ಲಿ ಇಟ್ಟುಕೊಂಡು ಪರೀಕ್ಷಾ ಕೇಂದ್ರದ ಹೊರಗಡೆಯಿಂದಲೇ ಕಾಲ್ ರಿಸೀವ್ ಮಾಡಿಕೊಂಡು ಹೋಗುತ್ತಿದ್ದರು ಎನ್ನಲಾಗಿದೆ.

ಸಣ್ಣ ಬ್ಲೂ ಟೂತ್ ಸ್ಪೀಕರ್ ಅನ್ನು ಕಿವಿಗೆ ಅವಳವಡಿಸಿಕೊಂಡು ಹೊರಗಿನಿಂದ ಹೇಳಿದ ಉತ್ತರವನ್ನು ಪರೀಕ್ಷಾ ಕೇಂದ್ರದ ಒಳಗಡೆ ಕುಳಿತು ಬರೆಯುತ್ತಿದ್ದರಂತೆ.
ಅಫಜಲಪುರದಲ್ಲಿರುವ ಆರೋಪಿ ಆರ್.ಡಿ. ಪಾಟೀಲ ಮನೆ ಮೇಲೆ ದಾಳಿ ಮಾಡಿದ ಸಂಧರ್ಭದಲ್ಲಿ ಒಟ್ಟು ಏಳು ಬ್ಲೂಟೂತ್ ಡಿವೈಸ್‌ಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ. ಪ್ರಕರಣದ ಸಂಬಂಧ ಆರ್.ಡಿ. ಪಾಟೀಲ, ಮಹಾಂತೇಶ ಪಾಟೀಲ ಸೇರಿ ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಒಂದೊಂದೇ ಸಂಚು ಬಯಲಾಗುತ್ತಿವೆ.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

ಹೆಚ್ಚು ಹಣ ಕೊಡುವ ಅಭ್ಯರ್ಥಿಗಳನ್ನು ಪತ್ತೆಹಚ್ಚಿ ಆರ್.ಡಿ. ಪಾಟೀಲ್ ಡೀಲ್ ಫಿಕ್ಸ್ ಮಾಡುತ್ತಿದ್ದ ಎನ್ನಲಾಗಿದೆ ಪ್ರತಿ ಅಭ್ಯರ್ಥಿಗೆ ಗರಿಷ್ಠ ೬೦ ಲಕ್ಷ ರೂ. ಫಿಕ್ಸ್ ಮಾಡುತ್ತಿದ್ದ ಆರೋಪಿಗಳಿಗೆ ಶಾಸಕರ ಗನ್‌ಮ್ಯಾನ್ ಹಯ್ಯಾಳಿ ದೇಸಾಯಿ ಡೀಲ್‌ ಕುದುರಿಸಿಕೊಡುತ್ತಿದ್ದನಂತೆ.
ಸಿಐಡಿ ತಂಡಕ್ಕೆ ಬಗೆದಷ್ಟು ರೋಚಕ ವಿಚಾರಗಳು ಬಯಲಾಗುತ್ತಿವೆ. ಡಿವೈಸ್ ಬಳಕೆ ಮಾಡಿ ಪಾಸಾದ ಮೂವರು ಅಭ್ಯರ್ಥಿಗಳು ಸಿಐಡಿ ಬಲೆಗೆ ಬಿದ್ದಿದ್ದು, ಮತ್ತಷ್ಟು ಸಂಗತಿಗಳು ಹೊರಬರುವ ಸಾಧ್ಯತೆಗಳಿವೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement