ಹುಬ್ಬಳ್ಳಿ: ರಾಜ್ಯ ಸರಕಾರಿ ಮಹಿಳಾ ನೌಕರರಿಗೆ ನೀಡುವ ಶಿಶುಪಾಲನಾ ರಜೆಯ ಅನುಕೂಲತೆಗಳನ್ನು ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳ ಮಹಿಳಾ ನೌಕರರಿಗೂ ವಿಸ್ತರಿಸಬೇಕೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅನುದಾನಿತ ಮಹಿಳಾ ಶಿಕ್ಷಣ ಸಂಸ್ಥೆಗಳ ಮಹಿಳಾ ನೌಕರರಿಗೂ 180 ದಿನಗಳ ಶಿಶುಪಾಲನಾ ರಜೆ ಸೌಲಭ್ಯವನ್ನು ವಿಸ್ತರಿಸುವಂತೆ ಆದೇಶ ಹೊರಡಿಸುವಲ್ಲಿ ಸಿಎಂ ಬೊಮ್ಮಾಯಿ ಸಹಕರಿಸಿದ್ದಾರೆಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಭಟ್ ತಿಳಿಸಿದ್ದಾರೆ.
ಸಭಾಪತಿ ಬಸವರಾಜ ಹೊರಟ್ಟಿಯವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಸುದೀರ್ಘವಾಗಿ ವಿವರಿಸಿ ತಾರತಾಮ್ಯದ ಮೇಲೆ ಬೆಳಕು ಚೆಲ್ಲಿದ್ದರು. ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡುವ ಬಗ್ಗೆ 2021-22ನೇ ಸಾಲಿನ ಆಯ-ವ್ಯಯದ ಭಾಷಣದಲ್ಲಿ ಕಂಡಿಕೆ 37ರಲ್ಲಿ ರಾಜ್ಯ ಸರಕಾರದ ಮಹಿಳಾ ನೌಕರರಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳವರೆಗೆ ಅಂದರೆ 180 ದಿನಗಳ ಶಿಶುಪಾಲನಾ ರಜೆಯನ್ನು ಘೋಷಿಸಿ ಸರ್ಕಾರಿ ಆದೇಶ ಸಂಖ್ಯೆ: ಆಇ4(ಇ) ಸೇನಿಸೇ 2021, ದಿನಾಂಕ:21-06-2021ರಂದು ಆದೇಶ ಹೊರಡಿಸಲಾಗಿದೆ. ಈ ಕುರಿತು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳಿಗೆ ಪ್ರತ್ಯೇಕವಾದ ಸೂಕ್ತ ತಿದ್ದುಪಡಿ ತರಲಾಗಿತ್ತು.
ಆದರೆ ಈ ಸೌಲಭ್ಯವನ್ನು ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳ ಮಹಿಳಾ ನೌಕರರಿಗೆ ವಿಸ್ತರಿಸಲು ಕರ್ನಾಟಕ ಶಿಕ್ಷಣ ಕಾಯ್ದೆಯಡಿ 1999ರಲ್ಲಿ ರೂಪಿಸಲಾದ ನಿಯಮಗಳಲ್ಲಿ 5ನೇ ಅಧ್ಯಾಯದ 26ನೇ ಕಂಡಿಕೆಯಲ್ಲಿ ಸಾಮಾನ್ಯ ನಿಯಮಾವಳಿ-1ರ ರಜೆ ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದಂತೆ “ರಜೆ ನಿಯಮಗಳಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಇರುವ ರಜಾ ನಿಯಮಾವಗಳಿಗಳು ತನ್ನಿಂದತಾನೇ ಅನುದಾನಿತ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಅನ್ವಯವಾಗಬೇಕು”ಎಂದು ಸ್ಪಷ್ಟವಾಗಿದ್ದರೂ ಕೂಡಾ ಅನುದಾನಿತ ಶಿಕ್ಷಣ ಸಂಸ್ಥೆಗಳ ಬೋಧಕ ಹಾಗೂ ಬೋಧಕೇತರ ಮಹಿಳಾ ಸಿಬ್ಬಂದಿಗೆ ಶಿಶುಪಾಲನಾ ರಜಾ ಸೌಲಭ್ಯವನ್ನು ವಿಸ್ತರಿಸಿರುವಲ್ಲಿ ವಿಳಂಬ ಮಾಡಲಾಗಿತ್ತು. ಸರ್ಕಾರವು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಪಾಲಿಸುತ್ತದೆ ಎಂಬ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ಹೊರಟ್ಟಿಯವರು ತಂದಿದ್ದರು.
ಈ ತಾರತಮ್ಯವನ್ನು ಅರಿತ ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ ಇವರ ಮೂಲಕ ಸರಕಾರದ ಉಪಕಾರ್ಯದರ್ಶಿ ಶಿಕ್ಷಣ ಇಲಾಖೆ (ಸೇವೆಗಳು) ಇವರಿಗೆ ಆದೇಶ ಹೊರಡಿಸುವಂತೆ ತಿಳಿಸಿದ್ದರು. ದಿನಾಂಕ:28-04-2022ರಂದು ಆರ್ಥಿಕ ಇಲಾಖೆಯಿಂದ ಹೊರಡಿಸಲಾದ ಆದೇಶದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರಿಗೆ ಮಂಜೂರು ಮಾಡಿದ 180 ದಿನಗಳ ಶಿಶುಪಾಲನಾ ರಜೆಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ಮಹಿಳಾ ನೌಕರರಿಗೂ ವಿಸ್ತರಿಸಿದ್ದಾರೆ. ಸಂಘಟನೆಯ ಪರವಾಗಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಸರ್ಕಾರದ ಗಮನ ಸೆಳೆದ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಖಾಸಗಿ ಅನುದಾನಿತ ಶಾಲಾ ಕಾಲೇಜುಗಳ ಮಹಿಳಾ ಸಿಬ್ಬಂದಿ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಲಾಗಿದೆ ಎಂದು ಜಿ.ಆರ್.ಭಟ್ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ