ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಬಿಸಿಲಿನ ತಾಪ ಇದೇ ರೀತಿ ಮುಂದುವರಿದಲ್ಲಿ ಮೇ 16ರಿಂದ ಆರಂಭವಾಗಬೇಕಿರುವ 2022-23ನೇ ಸಾಲಿನ ಶೈಕ್ಷಣಿಕ ಅವಧಿಯನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯು ಮೇ 16 ರಿಂದ ಶಾಲೆ ಆರಂಭಿಸಲು ನಿರ್ಧರಿಸಿದ್ದು, ಈ ಸಂಬಂಧ ಸುತ್ತೋಲೆ ಸಹ ಹೊರಡಿಸಲಾಗಿದೆ. ಪ್ರತಿ ವರ್ಷ ಮೇ ಕೊನೆಯಲ್ಲಿ ಶಾಲೆ ಆರಂಭವಾಗುತ್ತಿತ್ತು. ಎರಡು ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಶೈಕ್ಷಣಿಕ ಅವಧಿಯೇ ಕಡಿಮೆಯಾಗಿತ್ತು. ಹೀಗಾಗಿ ಅದನ್ನು ಸರಿದೂಗಿಸಲು ಮೇ 16ರಂದು ಶಾಲೆಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿತ್ತು.
ಆದರೆ, ಈ ವರ್ಷ ಬಿಸಿಲ ಧಗೆ ಹೆಚ್ಚಾಗಿದೆ. ಇದೇ ಸ್ಥಿತಿ ಮುಂದುವರಿದರೆ ಮಕ್ಕಳಿಗೆ ತರಗತಿಯೊಳಗೆ ಕುಳಿತುಕೊಳ್ಳಲು ಕಷ್ಟವಾಗಬಹುದು. ವಿಧಾನ ಪರಿಷತ್ ಎಸ್.ಎಲ್.ಭೋಜೇಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ರಜೆ ಅವಧಿ ವಿಸ್ತರಣೆ ಮಾಡಬೇಕೆಂದು ಈಗಾಗಲೇ ಮನವಿ ಮಾಡಿದ್ದಾರೆ.
ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ದಾವಣಗೆರೆ ಸೇರಿದಂತೆ ಮಲೆನಾಡು, ಅರೆ ಮಲೆನಾಡಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಶಾಲೆಗಳನ್ನು ಆರಂಭಿಸುವ ದಿನಾಂಕವನ್ನು ಮುಂದೂಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಭಾರತೀಯ ಹವಾಮಾನ ಇಲಾಖೆಯು ಮೇ ಮೊದಲ ವಾರದ ನಂತರ ದೇಶಾದ್ಯಂತ ತಾಪಮಾನ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು ಎಂದು ಹೇಳಿದೆ. ಜೊತೆಗೆ ಸದ್ಯಕ್ಕೆ ಶಾಲೆ ಆರಂಭದ ದಿನಾಂಕ ಮುಂದೂಡುವ ಆಲೋಚನೆ ಬಗ್ಗೆ ಸರ್ಕಾರ ಗಂಭೀರವಾಗಿ ಯೋಚಿಸಿಲ್ಲ. ಆದರೆ ತಾಪಮಾನ ಇದೇ ರೀತಿ ಮುಂದುವರಿದಲ್ಲಿಮಕ್ಕಳ ಆರೋಗ್ಯದ ದೃಷ್ಟಿಯಿಂದ ಮುಂದೂಡುವ ಬಗ್ಗೆ ಆಲೋಚಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಕೆಲ ದಿನಗಳಿಂದ ರಾಜ್ಯಾದ್ಯಂತ ತೀವ್ರ ಧಗೆ ಹೆಚ್ಚುತ್ತಿದೆ. ವಾತಾವರಣದ ತಾಪಮಾನ ಹೆಚ್ಚಿರುವುದರಿಂದ ಹಗಲು ಹಾಗೂ ರಾತ್ರಿ ಬಿಸಿಲ ತಾಪಮಾನ ಅನುಭವವಾಗುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ