ಬೆಂಗಳೂರು: ಅನಾರೋಗ್ಯದಿಂದಾಗಿ ಕನ್ನಡ ಚಿತ್ರರಂಗದ ಹಾಸ್ಯ ಹಾಗೂ ಪೋಷಕ ನಟ ಮೋಹನ್ ಜುನೇಜ (54) ವಿಧಿವಶರಾಗಿದ್ದಾರೆ.
ಬೆಂಗಳೂರಿನ ಹೆಸರುಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯಲ್ಲಿ ಮೋಹನ್ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದ ಕಾರಣ ಅವರನ್ನು ಕೆಲದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೋಹನ ಅವರು ಪತ್ನಿ ಕುಸುಮಾ, ಇಬ್ಬರು ಪುತ್ರರು ಅಕ್ಷಯ್, ಅಶ್ವಿನ್ ಅವರನ್ನು ಅಗಲಿದ್ದಾರೆ.
ಮೋಹನ್ ಜೂನೇಜ ಅವರಿಗೆ `ಚೆಲ್ಲಾಟ’ ಚಿತ್ರದ ಮಧುಮಗನ ಪಾತ್ರ ಖ್ಯಾತಿ ತಂದುಕೊಟ್ಟಿತ್ತು. ಕೆಜಿಎಫ್ ಭಾಗ ಒಂದು ಮತ್ತು ಎರಡರಲ್ಲೂ ಪೋಷಕ ನಟನಾಗಿ ಮೋಹನ್ ಜೂನೇಜ ಅವರು ಅಭಿನಯಿಸಿದ್ದರು. ‘ಕೆಜಿಎಫ್’, ‘ಕೆಜಿಎಫ್ 2’, ‘ನವಗ್ರಹ’, ‘ಗಣೇಶನ ಗಲಾಟೆ’ ‘ಜೋಗಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ವಠಾರ ಧಾರಾವಾಹಿಯಿಂದ ಜನಪ್ರಿಯರಾಗಿದ್ದ ಅವರು ನಂತರ ಸಿನೆಮಾದಲ್ಲಿ ಹಾಸ್ಯ ಹಾಗೂ ಪೋಷಕ ನಟನಾಗಿ ಕಾಲಿಟ್ಟರು. ನಂತರ ನೂರಕ್ಕೂ ಕನ್ನಡ ಸಿನೆಮಾಗಳಲ್ಲಿ ಅಭಿನಯಿಸಿದ್ದರು.
ಬೆಂಗಳೂರು ಉತ್ತರ ತಾಲ್ಲೂಕಿನ ತಮ್ಮೇನಹಳ್ಳಿಯಲ್ಲಿ ವಾಸವಾಗಿದ್ದ ಮೋಹನ ಅವರ ಮೃತದೇಹವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಕುಟುಂಬಸ್ಥರು, ಬಂಧುಗಳು, ಕಲಾವಿದರು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ