ಹಾವೇರಿ: ಕೃಷ್ಣಮೃಗಗಳ ಬೇಟೆ, ಐವರು ಆರೋಪಿಗಳ ಬಂಧನ

ಹಾವೇರಿ: ಎರಡು ಹೆಣ್ಣು ಕೃಷ್ಣಮೃಗಗಳನ್ನು ಬೇಟೆಯಾಡಿದ್ದ ಐವರು ಆರೋಪಿಗಳನ್ನು ರಟ್ಟೀಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಸತ್ತಿರುವ ಕೃಷ್ಣಮೃಗಗಳ ಮೇಲೆ ಬಂದೂಕಿನಿಂದ ಸಿಡಿದ ಗುಂಡಿನ ಕಲೆಗಳಿವೆ.
ಭಾನುವಾರ ಮುಂಜಾನೆ ರಾಣೇಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ರಾತ್ರಿ ಕರ್ತವ್ಯ ನಿರತರಾಗಿದ್ದ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಂ (ಇಆರ್‌ಎಸ್‌ಎಸ್) ಸಿಬ್ಬಂದಿ ವಾಹನ ತಪಾಸಣೆಯಲ್ಲಿ ತೊಡಗಿದ್ದಾಗ ಪಿಕಪ್ ವಾಹನವೊಂದು ನಿಲ್ಲದೆ ತಪಾಸಣಾ ಕೇಂದ್ರ ದಾಟಿ ಅತಿವೇಗದಲ್ಲಿ ದಾಟಿತು. ಅನುಮಾನಗೊಂಡ ಪೊಲೀಸರು ವಾಹನವನ್ನು ಬೆನ್ನಟ್ಟಿ ಬಂಧಿಸಿದ್ದಾರೆ.

ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಮತ್ತು ಸೈರನ್ ಸದ್ದು ಮಾಡಿದರೂ ವಾಹನ ನಿಲ್ಲಲಿಲ್ಲ, ಹೀಗಾಗಿ ವೇಗವಾಗಿ ಬಂದ ವಾಹನವನ್ನು ತಡೆಯಲು ಪೊಲೀಸರು ಹಿರೇಕೆರೂರು ಮತ್ತು ರಟ್ಟೀಹಳ್ಳಿಯ ಇತರ ಇಆರ್‌ಎಸ್‌ಎಸ್ ತಂಡಗಳ ಸಹಾಯವನ್ನು ಕೋರಿದರು. ಕೊನೆಗೆ ರಟ್ಟೀಹಳ್ಳಿ ಪಟ್ಟಣದ ಬಳಿ ವಾಹನವನ್ನು ತಡೆದು ಆರೋಪಿಗಳನ್ನು ಬಂಧಿಸಲಾಯಿತು ಎಂದು ಹೇಳಲಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ನಿವಾಸಿಗಳಾದ ಸಾದಿಕ್ (48), ಮಹಮ್ಮದ್ ಅಲಿ ನಜೀರ್ (32), ಸೈಯದ್ ಮುಕೀಬ್ (21), ಸೈಯದ್ ನಸರುಲ್ಲಾ (52), ಸುಲ್ತಾನ್ ಖಾನ್ (21) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ ಮೃತ ಪಟ್ಟಿರುವ ಎರಡು ಹೆಣ್ಣು ಕೃಷ್ಣಮೃಗಗಳ ಮೃತದೇಹಗಳನ್ನು ವಶಪಡಿಸಿಕೊಂಡಿದ್ದು, ಒಂದು ರೈಫಲ್, ಖಾಲಿ ಕಾರ್ಟ್ರಿಜ್‌ಗಳು, ಚಾಕುಗಳು, ಒಂದು ಬೂಲೆರೋ ವಾಹನ ವಶಪಡಿಸಿಕೊಳ್ಳಲಾಗಿದೆ. ರಟ್ಟೀಹಳ್ಳಿಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಕೃಷ್ಣಮೃಗಗಳನ್ನು ಬೇಟಿಯಾಡಿದ್ದ ಆರೋಪಿಗಳನ್ನು ಹಿರೇಕೆರೂರು, ರಟ್ಟೀಹಳ್ಳಿ, ಹಲಗೇರಿ ಪೊಲೀಸರು ಹಾಗೂ ಇಆರ್‌ಎಸ್‌ಎಸ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೃಷ್ಣಮೃಗಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಶೆಡ್ಯೂಲ್ 1 ರ ಅಡಿಯಲ್ಲಿ ಸಂರಕ್ಷಿಸಲಾಗಿದೆ ಮತ್ತು ಅವುಗಳನ್ನು ಬೇಟೆಯಾಡಿದ ಅಪರಾಧ ಸಾಬೀತಾದರೆ ಆರೋಪಿಗಳು ದಂಡದ ಜೊತೆಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement