ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ: ಆರೋಪಿ ಬಂಧನ

ಬೆಂಗಳೂರು: ತನ್ನ ಅಕ್ಕನಿಗೆ ವಿಚ್ಛೇದನ ನೀಡಿದ  ಬಾವನನ್ನು ಸಿಲುಕಿಸುವ ಉದ್ದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಕಂಟ್ರೋಲ್ ರೂಮ್‍ಗೆ ಫೋನ್ ಕರೆ ಮಾಡಿ ಪೊಲೀಸರ ನಿದ್ದೆಗೆಡಿಸಿದ್ದ ಕೋಲ್ಕತ್ತಾದ ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಗರದ ವಿಲ್ಸನ್ ಗಾರ್ಡನ್‍ನ ಪಿಜಿಯಲ್ಲಿ ವಾಸವಾಗಿದ್ದ ಸುಭಾಷಿ ಗುಪ್ತಾ (35) ಪೊಲೀಸರ ವಶದಲ್ಲಿರುವ ಆರೋಪಿ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳದಿಂದ ಉದ್ಯೋಗ ಅರಸಿಕೊಂಡು ಬಂದು ಈ ಹಿಂದೆ ಏರ್‍ಪೋರ್ಟ್‍ನ ಕಾರ್ಗೋದ ಕೊರಿಯರ್‌ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ನಂತರ ಆ ಕೆಲಸ ಬಿಟ್ಟಿದ್ದರು.

ಪಿಜಿಯಲ್ಲಿ ತಂಗಿದ್ದ ಈತನಿಗೆ ಬೆಳಗಿನ ಜಾವ 3:30ರ ವರೆಗೂ ನಿದ್ದೆ ಬಂದಿರಲಿಲ್ಲ. ಆಗ ದುರುದ್ದೇಶ ಇಟ್ಟುಕೊಂಡು ಪೊಲೀಸ್ ಕಂಟ್ರೋಲ್ ರೂಂಗೆ ಬೆಳಗಿನ ಜಾವ 3:45ರ ಸುಮಾರಿನಲ್ಲಿ ದೂರವಾಣಿ ಕರೆ ಮಾಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೀಪಕ್ ಎಂಬಾತ ಬಾಂಬ್ ಇಟ್ಟಿದ್ದಾನೆ ಎಂದು ಹೇಳಿ ಪೋನ್ ಕಟ್‌ ಮಾಡಿದ್ದಾನೆ.
ತಕ್ಷಣವೇ ಜಾಗೃತರಾದ ಪೊಲೀಸ್ ಕಂಟ್ರೋಲ್ ರೂಂನವರು ವಿಮಾನ ನಿಲ್ದಾಣದ ಪೊಲೀಸ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ, ಪೊಲೀಸರು ಹಾಗೂ ಸಿಐಎಸ್‍ಎಫ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರೂ ಎಲ್ಲಿಯೂ ಏನೂ ಪತ್ತೆಯಾಗಿಲ್ಲ. ನಂತರ ಇದು ಹುಸಿಕರೆ ಎಂಬುದನ್ನು ಪೊಲೀಸರು ಖಚಿತಪಡಿಸಿಕೊಂಡರು.

ಪ್ರಮುಖ ಸುದ್ದಿ :-   ಐಟಿ ಅಧಿಕಾರಿಗಳ ದಾಳಿ, ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಕಾರಿನಲ್ಲಿದ್ದ 2 ಕೋಟಿ ರೂ. ವಶಕ್ಕೆ

ನಂತರ ಪೊಲೀಸ್ ಕಂಟ್ರೋಲ್ ರೂಂಗೆ ಹುಸಿ ಕರೆ ಮಾಡಿದ ವ್ಯಕ್ತಿಯ ಪತ್ತೆಗಾಗಿ ಎಸಿಪಿ ಬಾಲಕೃಷ್ಣ ನೇತೃತ್ವದಲ್ಲಿ ತನಿಖೆ ಕೈಗೊಂಡು ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ಪೊಲೀಸರು ವಿಚಾರಣೆಗೊಳಪಡಿಸಿದಾಗ, ಬಾವ ದೀಪಕ್ ತನ್ನ ಅಕ್ಕನಿಗೆ ವಿಚ್ಛೇದನ ನೀಡಿದ್ದರಿಂದ ಕೋಪಗೊಂಡು ಈ ಪ್ರಕರಣದಲ್ಲಿ ಸಿಲುಕಿಸಿ ಆತನಿಗೆ ಬುದ್ಧಿ ಕಲಿಸಲು ಈ ರೀತಿ ಕರೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ. ಈ ಕುರಿತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement