ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು: ರಾಜ್ಯ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ವಕ್ತಾರ ನಾಗಾರಾಜ್ ಯಾದವ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.
ಹಲವು ದಿನಗಳಿಂದ ಕಾಂಗ್ರೆಸ್‍ನ ಹಿರಿಯ ನಾಯಕರು ಟಿಕೆಟ್‍ಗಾಗಿ ಹೈಕಮಾಂಡ್ ಕದತಟ್ಟಿದ್ದರು. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡಲು ಭಾರೀ ಕಸರತ್ತು ನಡೆಸಿದ್ದರು. ಆದರೆ ಹೈಕಮಾಂಡ್ ಇವರೆಲ್ಲರಿಗೂ ಶಾಕ್‌ ನೀಡಿದ್ದು, ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.

ಜಾತಿ ಸಮೀಕರಣದಲ್ಲಿ ಯಾದವ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ನಾಗರಾಜ ಯಾದವ ಅವರಿಗೆ ಅವಕಾಶ ನೀಡಿದೆ. ಯಾದವ್ ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೆ ಇರುವುದು ಅವರಿಗೆ ಆಯ್ಕೆಗೆ ಕಾರಣ ಎಂದು ಹೇಳಲಾಗಿದೆ.

ಈ ಹಿಂದೆ ಒಂದು ಬಾರಿ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ಪರಿಷತ್‍ಗೆ ನಾಮನಿರ್ದೇಶನಗೊಂಡಿದ್ದ ಅಬ್ದುಲ್ ಜಬ್ಬಾರ್‌ಗೆ ಹೈಕಮಾಂಡ್ ಮಣೆ ಹಾಕಿದೆ. ಪ್ರಸ್ತುತ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜಾಧ್ಯಕ್ಷರಾಗಿರುವ ಅಬ್ದುಲ್ ಜಬ್ಬಾರ್ ಮತ್ತೊಂದು ಅಚ್ಚರಿ ಆಯ್ಕೆ ಎಂದೇ ಹೇಳಲಾಗುತ್ತಿದೆ. ವಿಧಾನ ಪರಿಷತ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದ ಎಸ್‌.ಆರ್‌.ಪಾಟೀಲ ಅವರಿಗೆ ತೀವ್ರ ನಿರಾಸೆಯಾಗಿದೆ.

ಪ್ರಮುಖ ಸುದ್ದಿ :-   ಭಟ್ಕಳ : ಮೀನುಗಾರಿಕಾ ಬೋಟ್ ಮುಳುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement