ಕುರ್ಚಿಗಾಗಿ ಮಕ್ಕಳೆದುರೇ ಇಬ್ಬರು ಶಿಕ್ಷಕಿಯರಿಂದ ಮಕ್ಕಳಂತೆ ಕಾದಾಟ.. ವಿದ್ಯಾರ್ಥಿಗಳೇ ಕಂಗಾಲು | ವೀಕ್ಷಿಸಿ

ಶಿಕ್ಷಕರು ದಾರಿ ತೋರಿಸಬೇಕಾದ ಭವಿಷ್ಯದ ಪ್ರಜ್ಞೆಗಳನ್ನು ರೂಪಿಸಬೇಕಾದ ಶಿಕ್ಷಕರೇ ಕುರ್ಚಿಗಾಗಿ ಮಕ್ಕಳೆದುರೇ ಚಿಕ್ಕ ಮಕ್ಕಳಂತೆ ಜಗಳವಾಡಿಕೊಂಡ ಘಟನೆ ವರದಿಯಾಗಿದೆ.
ಸದ್ಯ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿರುವ ಚಿತ್ರಕೂಟ ಚಕೌಂಧದ ಸಂಯುಕ್ತ ಶಾಲೆಯಲ್ಲಿ. ಇಲ್ಲಿ ಶಾಲೆಯ ಮುಖ್ಯಾಧ್ಯಾಪಕಿ ಮತ್ತು ಸಹಾಯಕ ಶಿಕ್ಷಕಿ ಕುರ್ಚಿಗಾಗಿ ಕಾದಾಟ ನಡೆಸಿದ್ದಾರೆ…!

ಒಂದು ಕುರ್ಚಿಯನ್ನು ಹಿಡಿದು ಮುಖ್ಯಾಧ್ಯಾಪಕಿ ಪೂಜಾ ಗುಪ್ತಾ ಮತ್ತು ಸಹಾಯಕ ಶಿಕ್ಷಕಿ ಪ್ರಿಯಾಂಕಾ ಶುಕ್ಲಾ ಎಂಬವರು ಜಗಳ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಒಂದು ಕೈಯಲ್ಲಿ ಕೋಲು ಹಿಡಿದುಕೊಂಡಿದ್ದ ಮುಖ್ಯೋಪಾಧ್ಯಾಯಿನಿ ಮತ್ತೊಂದು ಕೈಯಲ್ಲಿ ಕುರ್ಚಿಯನ್ನು ಹೊರಗೆ ಒಯ್ಯಲು ಹಿಡಿದು ಎಳೆಯುತ್ತಿದ್ದರು. ಆದರೆ, ಸಹಾಯಕ ಶಿಕ್ಷಕಿ ಪ್ರಿಯಾಂಕಾ ಶುಕ್ಲಾ ಈ ಕುರ್ಚಿಯನ್ನು ಕ್ಲಾಸ್‌ ರೂಮ್‌ನಲ್ಲೇ ಉಳಿಸುವ ಪ್ರಯತ್ನ ಮಾಡುತ್ತಿದ್ದರು. ಮಕ್ಕಳ ಎದುರೇ ಇವರು ಈ ರೀತಿ ಜಗಳ ಮಾಡಿಕೊಂಡಿದ್ದಾರೆ.

ಇವರಿಬ್ಬರು ಕುರ್ಚಿ ಸಲುವಾಗಿ ಹೇಗೆ ಜಗಳವಾಡಿಕೊಂಡಿದ್ದರು ಅಂದರೆ ಮಕ್ಕಳೂ ಸಹ ಆ ರೀತಿ ಜಗಳವಾಡುವುದಿಲ್ಲ. ವಿಶೇಷವೆಂದರೆ ತಮ್ಮ ಈ ಕಾದಾಟದಲ್ಲಿ ವಿದ್ಯಾರ್ಥಿನಿಯರನ್ನೂ ಎಳೆದು ತಂದಿದ್ದು ಸಹ ವೀಡಿಯೊದಲ್ಲಿ ಕಂಡುಬಂದಿದೆ…! `ಈ ಕುರ್ಚಿ ನನ್ನದು. ನಾನು ಯಾವಾಗಲೂ ಇದರಲ್ಲಿಯೇ ಕುಳಿತುಕೊಳ್ಳುವುದು ಎಂದು ಹೇಳುತ್ತ ಇದಕ್ಕೆ ಸಾಕ್ಷಿಯಾಗಿ ವಿದ್ಯಾರ್ಥಿನಿಯನ್ನೂ ಎಳೆದುಕೊಂಡು ಬಂದಿದ್ದಾರೆ ಒಬ್ಬಳು ಶಿಕ್ಷಕಿ..! ಶಿಕ್ಷಕಿಯರ ಈ ಕಿತ್ತಾಟಕ್ಕೆ ಮಕ್ಕಳಿಗೆ ಏನು ಮಾಡಬೇಕೆಂದಯ ತಿಳಿಯದೆ ಗೊಂದಲಕ್ಕೆ ಒಳಗಾಗಿರುವುದು ಕಂಡುಬರುತ್ತದೆ. ಜೊತೆಗೆ ಅವರಿಗೆ ಪುಕ್ಕಟೆ ಮನರಂಜನೆಯೂ ಸಿಕ್ಕಿದೆ.

ಸ್ಥಳೀಯರು ಹೇಳುವಂತೆ ಈ ಶಾಲೆಯಲ್ಲಿ ಪೂಜಾ ಗುಪ್ತಾ ಮತ್ತು ಪ್ರಿಯಾಂಕಾ ಶುಕ್ಲಾ ನಡುವೆ ಸದಾ ಜಗಳ ನಡೆಯುತ್ತಿರುತ್ತದೆಯಂತೆ. ಇವರಿಬ್ಬರ ಜಗಳದಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ ಎಂಬ ಆರೋಪ ಪೋಷಕರದ್ದು. ಸದ್ಯ ಈ ವಿಡಿಯೋ ವಿವಿಧ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯ ಕಂಡ ನೆಟ್ಟಿಗರು ಆಘಾತ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement