ಬೆಂಗಳೂರು: ಪಿಎಂ-ಕಿಸಾನ್ ಕರ್ನಾಟಕ ಯೋಜನೆಯಡಿ ರಾಜ್ಯದ ಕಂತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು, ಗುರುವಾರ ರಾಜ್ಯದ ಅರ್ಹ ಪ್ರತಿ ರೈತರಿಗೆ 2000 ರೂ. ಗಳನ್ನು ಬಿಡುಗಡೆ ಮಾಡಿದರು.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ 47.86 ಲಕ್ಷ ರೈತರಿಗೆ ಒಟ್ಟು 956.71 ಕೋಟಿ ರೂ. ಮೊತ್ತವನ್ನು ರಾಜ್ಯದ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಬಿಡುಗಡೆ ಮಾಡಿದರು. ರಾಜ್ಯ ಸರ್ಕಾರವು ಈವರೆಗೆ ಒಟ್ಟು 3861.66 ಕೋಟಿ ರೂ. ನೆರವನ್ನು ರೈತರಿಗೆ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 2019ರಿಂದ ಮಾರ್ಚ್ ವರೆಗೆ 53.83 ಲಕ್ಷ ರೈತರಿಗೆ 8702.29 ಕೋಟಿ ರೂ. ನೆರವು ಬಿಡುಗಡೆ ಮಾಡಿದೆ. ಮೇ 31ರಂದು ಮಾನ್ಯ ಪ್ರಧಾನ ಮಂತ್ರಿಗಳು ರಾಜ್ಯದ 49.30 ಲಕ್ಷ ರೈತರಿಗೆ 1279.86 ಕೋಟಿ ರೂ. ಬಿಡುಗಡೆ ಮಾಡಿದ್ದರು.
ಕೃಷಿ ಸಚಿವ ಬಿ.ಸಿ. ಪಾಟೀಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಐಎಸ್ಎನ್ ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ಕೃಷಿ ಇಲಾಖೆ ಕಾರ್ಯದರ್ಶಿ ಶಿವಯೋಗಿ ಸಿ. ಕಳಸದ ಮೊದಲಾದವರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ