ನಟಿ ಚಿತ್ರಾ ಹಳ್ಳಿಕೇರಿ ಪತಿ ವಿರುದ್ಧದ ಬ್ಯಾಂಕ್‌ ಖಾತೆ ದುರ್ಬಳಕೆ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು: ಬ್ಯಾಂಕ್ ಖಾತೆ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಚೈತ್ರಾ ಹಳ್ಳಿಕೇರಿ ಅವರು ತಮ್ಮ ಪತಿ ಉದ್ಯಮಿ ಬಾಲಾಜಿ ಪೋತರಾಜು ಮತ್ತು ಮಾವ ಎಂ ಕೆ ಪೋತರಾಜು ವಿರುದ್ಧ ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯದ ಮುಂದಿನ ಪ್ರಕ್ರಿಯೆಗೆ ಶುಕ್ರವಾರ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಬಾಲಾಜಿ ಪೋತರಾಜು ಮತ್ತು ಅವರ ತಂದೆ ಎಂ ಕೆ ಪೋತರಾಜು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ವಿಚಾರಣೆ ನಡೆಸಿತು.
ನಟಿ ಚೈತ್ರಾ ದೂರು ಆಧರಿಸಿ ಬೆಂಗಳೂರಿನ ವೈಟ್‌ ಫೀಲ್ಡ್ ಠಾಣೆ ಪೊಲೀಸರು, ಬಾಲಾಜಿ ಹಾಗೂ ಎಂ ಕೆ ಪೋತರಾಜು ವಿರುದ್ಧ ದಾಖಲಿಸಿರುವ ಎಫ್‌ಐಆರ್ ಹಾಗೂ ದೂರಿಗೆ ಸಂಬಂಧಿಸಿದ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್‌ ಪೀಠವು ಮಧ್ಯಂತರ ತಡೆ ನೀಡಿ ಆದೇಶಿಸಿತು.

ನಟಿ ತನ್ನ ಪತಿ, ಮಾವ ಮತ್ತು ಬ್ಯಾಂಕ್ ಮ್ಯಾನೇಜರ್ ವಿರುದ್ಧ ತನಗೆ ತಿಳಿಯದಂತೆ ತನ್ನ ಸಹಿಯನ್ನು ನಕಲಿ ಮಾಡಿ ಮತ್ತು ತನ್ನ ಬ್ಯಾಂಕ್ ಖಾತೆಯನ್ನು ಬಳಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.
ಪೋತರಾಜ್ ಹಾಗೂ ಆತನ ತಂದೆ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂಎಸ್ ಶ್ಯಾಮ್ ಸುಂದರ್, ಚೈತ್ರಾ ಅವರು ಉದ್ಯಮಿಯ ವಿಚ್ಛೇದಿತ ಪತ್ನಿಯಾಗಿದ್ದು, ಸುಳ್ಳು ದೂರು ದಾಖಲಿಸಿದ್ದಾರೆ ಎಂದು ವಾದಿಸಿದರು. ಬಾಲಾಜಿ ಪೋತರಾಜ್ ತನ್ನ ಪತ್ನಿ ವಿರುದ್ಧ ವಿಚ್ಛೇದನ ಪ್ರಕರಣ ದಾಖಲಿಸಿದ ನಂತರ ಸುಳ್ಳು ದೂರು ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಹೈಕೋರ್ಟ್ ಏಕಸದಸ್ಯ ಪೀಠವು ವಿಚಾರಣೆಗೆ ತಡೆ ನೀಡಿ ಮಧ್ಯಂತರ ಆದೇಶ ನೀಡಿದೆ.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

ಪ್ರಕರಣ ಹಿನ್ನೆಲೆ:
ನಟಿ ಚೈತ್ರಾ ಮತ್ತು ಬಾಲಾಜಿ 2006ರಲ್ಲಿ ಮದುವೆಯಾಗಿದ್ದು, ಕೌಟುಂಬಿಕ ಕಲಹದ ಆರೋಪದಡಿ ಚೈತ್ರಾ ಅವರು ಬಾಲಾಜಿ ವಿರುದ್ಧ 2018ರಲ್ಲಿ ದೂರು ದಾಖಲಿಸಿದ್ದರು. ಬಳಿಕ ದಂಪತಿ ಸಹಬಾಳ್ವೆ ಮುಂದುವರಿಸಿದ್ದರು. ಆದರೆ, ಪತ್ನಿಯ ಕಿರುಕುಳ ಸಹಿಸಲಾಗುತ್ತಿಲ್ಲ ಎಂದು ಆರೋಪಿಸಿದ್ದ ಬಾಲಾಜಿ 2021ರ ಮಾರ್ಚ್‌ನಲ್ಲಿ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಪ್ರತಿಯಾಗಿ ಚೈತ್ರಾ 2021ರ ಸೆಪ್ಟೆಂಬರ್‌ನಲ್ಲಿ ಬಾಲಾಜಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ನೀಡಿದ್ದರು ಮತ್ತು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಇತ್ತೀಚೆಗೆ ಚೈತ್ರಾ ಅವರು ನನ್ನ ಬ್ಯಾಂಕ್ ಖಾತೆಯಲ್ಲಿದ್ದ ₹ 14 ಲಕ್ಷ ಮೊತ್ತವನ್ನು ಬಾಲಾಜಿ ಮತ್ತವರ ತಂದೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ವೈಟ್‌ಫೀಲ್ಡ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಈ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದ್ದರು.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement