ಕಿಮ್ಸ್‌ನಲ್ಲಿ ನಾಪತ್ತೆಯಾಗಿದ್ದ 40 ದಿನದ ಮಗು ಆಸ್ಪತ್ರೆಯಲ್ಲಿ ಪ್ರತ್ಯಕ್ಷ…! ಅಪಹರಣ ಪ್ರಕರಣಕ್ಕೆ ಟ್ವಿಸ್ಟ್

ಹುಬ್ಬಳ್ಳಿ: ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ತಾಯಿಯ ಕೈಯಿಂದ ಅಪಹರಣವಾಗಿದ್ದ 40 ದಿನದ ಮಗು ರಾತ್ರೋರಾತ್ರಿ ಆಸ್ಪತ್ರೆಯ ಆವರಣದಲ್ಲೇ ಪತ್ತೆಯಾಗಿದೆ…! ಸದ್ಯ ಮಗುವನ್ನು ಐಸಿಯುವಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಳಿ ಅಂಗಿ ಧರಿಸಿದ್ದ ಕಪ್ಪು ಬಣ್ಣದ ವ್ಯಕ್ತಿ ತನ್ನ ಮಡಿಲಿನಲ್ಲಿದ್ದ ಮಗುವನ್ನು ಅಪಹರಿಸಿಕೊಂಡು ಹೋಗಿದ್ದ ಎಂದು ಮಗುವಿನ ತಾಯಿ ದೂರಿದ್ದಳು.

ಈ ಕುರಿತು ವಿದ್ಯಾನಗರ ಪೊಲೀಸ್‌ ಠಾಣೆಯಲ್ಲೂ ಮಗು ಅಪಹರಣದ ಪ್ರಕರಣ ದಾಖಲಾಗಿತ್ತು. ಮಗುವಿನ ಪತ್ತೆಗೆ ಮಹಾನಗರ ಪೊಲೀಸ್ ಆಯುಕ್ತರು ಮೂರು ವಿಶೇಷ ತಂಡಗಳನ್ನು ಸಹ ನಿಯೋಜಿಸಿದ್ದರು. ಆದರೂ ಮಗು ಅವರಿಗೆ ಸಿಕ್ಕಿರಲಿಲ್ಲ. ಆದರೆ ಮಗು ಇದ್ದಕ್ಕಿದ್ದಂತೆ ಆಸ್ಪತ್ರೆಯಲ್ಲಿ ಪತ್ತೆಯಾಗಿದೆ. ಚರಂಡಿ ಕಟ್ಟೆ ಮೇಲೆ ಯಾರೋ ಮಗುವನ್ನು ಇಟ್ಟು ಹೋಗಿದ್ದಾರೆ. ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ಬಂದಿದ್ದ ಮಹಿಳೆಯೊಬ್ಬಳು ಮಗು ಅಳುವ ಶಬ್ದ ನೋಡಿ ಹತ್ತಿರ ಹೋಗಿ ಮಗುವನ್ನು ನೋಡಿದ ನಂತರ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ನಂತರ ಹಿಂದಿನ ದಿನ ಅಂದರೆ ಸೋಮವಾರ ಮಧ್ಯಾಹ್ನ ಕಳುವಾಗಿದ್ದ ಮಗು ಇದೇ ಎನ್ನುವುದು ನಂತರ ತಿಳಿದಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಇದನ್ನು ಸೋಮವಾರ ರಾತ್ರಿ ಅಥವಾ ಮಂಗಳವಾರ ಬೆಳಗಿನ ಜಾವ ತಂದಿಟ್ಟಿರಬಹುದು ಎಂದು ಶಂಕಿಸಲಾಗಿದೆ. ಮಗು ಅಪಹರಣದ ಪ್ರಕರಣ ದೊಡ್ಡ ಸುದ್ದಿಯಾಗಿ ಪೊಲೀಸರು ಮೂರು ತಂಡ ರಚಿಸದ್ದು ಸಹ ಗೊತ್ತಾಗಿ ಮಗುವನ್ನು ಮರಳಿ ಆಸ್ಪತ್ರೆ ಆವರಣದಲ್ಲಿ ಬಿಟ್ಟು ಹೋಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಮಗುವನ್ನು ಕದ್ದದ್ದು ಯಾರು ಹಾಗೂ ಬಿಟ್ಟುಹೋದದ್ದು ಯಾಕೆ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ. ಇದು ಅಪಹರಣದ ಪ್ರಕರಣವೋ ಅಥವಾ ಇದಕ್ಕೆ ಕೌಟುಂಬಿಕ ಕಾರಣ ಏನಾದರೂ ಇದೆಯೋ ಎಂಬುದು ತನಿಖೆಯಿಂದ ಹೊರಬರಲಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement