ಜೈಲಿನಲ್ಲಿರುವ ಮಗನಿಗೆ ಡ್ರಗ್ಸ್ ಪೂರೈಸಲು ಯತ್ನಿಸಿದ ತಾಯಿ ಬಂಧನ

ಬೆಂಗಳೂರು: ಜೈಲಿನಲ್ಲಿರುವ ತನ್ನ ಮಗನಿಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಮಾದಕವಸ್ತು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ
ಬಂಧಿತ ಮಹಿಳೆಯನ್ನು ಬೆಂಗಳೂರಿನ ಶಿಕಾರಿಪಾಳ್ಯ ನಿವಾಸಿ ಪರ್ವೀನ್ ತಾಜ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಆರೋಪಿ ಮಹಿಳೆ ಜೈಲಿನಲ್ಲಿರುವ ತನ್ನ ಮಗನ ಸೂಚನೆಯಂತೆ ಜೈಲಿಗೆ ಡ್ರಗ್ಸ್ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾಳೆ.

ಪರ್ವೀನ್ ತಾಜ್ ಪುತ್ರ ಮೊಹಮ್ಮದ್ ಬಿಲಾಲ್​ನನ್ನು 2020ರಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೋಣನಕುಂಟೆ ಪೊಲೀಸರು ಬಂಧಿಸಿ, ವಿಚಾರಣಾಧೀನ ಕೈದಿಯಾಗಿ ಜೈಲಿನಲ್ಲಿರಿಸಿದ್ದಾರೆ. ಜೂನ್ 13 ರಂದು ಪರ್ವೀನ್ ತಾಜ್ ಜೈಲಿನಲ್ಲಿರುವ ತನ್ನ ಮಗನನ್ನು ಭೇಟಿ ಮಾಡಲು ಬಂದಿದ್ದಳು, ಭೇಟಿಯ ಸಮಯದಲ್ಲಿ ಮಗನಿಗೆ ಬಟ್ಟೆಯ ಚೀಲ ನೀಡಿದ್ದಾಳೆ. ಆದರೆ ಬ್ಯಾಗ್ ತಪಾಸಣೆ ನಡೆಸಿದಾಗ 200 ಗ್ರಾಂ ಹ್ಯಾಶಿಶ್ ಆಯಿಲ್ (ಡ್ರಗ್ಸ್) ಪತ್ತೆಯಾಗಿದೆ. ಕೂಡಲೇ ಮಹಿಳೆಯನ್ನು ಬಂಧಿಸಿದ್ದಾರೆ. ವಶಪಡಿಸಿಕೊಂಡ ಹ್ಯಾಶಿಶ್ ಆಯಿಲ್​ ಮೌಲ್ಯ 5 ಲಕ್ಷ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ.

ನನ್ನ ಮಗ ನನಗೆ ಯಾರದೋ ಮೊಬೈಲ್​ನಿಂದ ಕರೆ ಮಾಡಿ ತನ್ನ ಸ್ನೇಹಿತ ನೀಡುವ ಬಟ್ಟೆ ಬ್ಯಾಗ್​ ತರುವಂತೆ ಹೇಳಿದ್ದಾನೆ. ಈ ಬ್ಯಾಗ್​ನಲ್ಲಿ ಡ್ರಗ್ಸ್ ಇರುವ ಬಗ್ಗೆ ಗೊತ್ತಿರಲಿಲ್ಲ. ಆತನ ಸ್ನೇಹಿತ ಕೊಟ್ಟ ಬ್ಯಾಗ್​ ತಂದಿದ್ದೆ ಎಂದು ವಿಚಾರಣೆ ವೇಳೆ ತಾಯಿ ಹೇಳಿದ್ದಾಳೆ.
ಆಕೆಯ ಮಗ ಜೈಲಿನಿಂದ ಕರೆ ಮಾಡಿದ್ದ ನಂಬರ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮಾದಕ ವಸ್ತು ಬಚ್ಚಿಟ್ಟಿದ್ದ ಬ್ಯಾಗ್ ಅನ್ನು ಒಪ್ಪಿಸಿದ ಸ್ನೇಹಿತನ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ. ಮೊಹಮ್ಮದ್ ಬಿಲಾಲ್ ಜೈಲಿನಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡಲು ಯೋಚಿಸಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು: ಸಿಎಂ ಸಿದ್ದರಾಮಯ್ಯ, ಡಿಸಿಎಂಗೆ ಡಿಕೆಶಿಗೆ ಸಮನ್ಸ್‌ ಮರು ಜಾರಿ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement