ಡಾ. ಅಂಬೇಡ್ಕರ್​ ಸ್ಕೂಲ್​ ಆಫ್​ ಎಕನಾಮಿಕ್ಸ್​​ ಉದ್ಘಾಟನೆ, ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಮೋದಿ

ಬೆಂಗಳೂರು: ಜ್ಞಾನಭಾರತಿ ಕ್ಯಾಂಪಸ್​ ಬಳಿ ಇರುವ ಆವರಣದಲ್ಲಿರುವ ಡಾ.ಬಿ.ಆರ್​.ಅಂಬೇಡ್ಕರ್​ ಸ್ಕೂಲ್​ ಆಫ್​ ಎಕನಾಮಿಕ್ಸ್​ (ಬೇಸ್​) ವಿವಿ ಕ್ಯಾಂಪಸ್​ ಅನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು.ಈ ವೇಳೆ ಡಾ.ಅಂಬೇಡ್ಕರ ಅವರ ಪುತ್ಥಳಿಯನ್ನೂ ಪ್ರಧಾನಿ ಅನಾವರಣ ಮಾಡಿದರು.
201 ಕೋಟಿ ರೂ. ವೆಚ್ಚದಲ್ಲಿ ಬೇಸ್​ ವಿವಿಯ ನೂತನ ಕ್ಯಾಂಪಸ್​ ಅನ್ನು ನಿರ್ಮಿಸಲಾಗಿದೆ. ಮೇಲ್ದರ್ಜೆಗೇರಿಸಿದ 150 ಐಟಿಐ ಹಬ್​ಗಳನ್ನೂ ಲೋಕಾರ್ಪಣೆ ಮಾಡಿದರು. ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿರುವ ಐಟಿಐ ಹಬ್​ಗಳನ್ನು ಪ್ರಧಾನಿ ಅವರು ಖುದ್ದು ವೀಕ್ಷಿಸಿದರು. ಪ್ರತಿ ವರ್ಷ 1.2 ಲಕ್ಷ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡುವ ಗುರಿ ಹೊಂದಲಾಗಿದೆ.

ಇದಲ್ಲದೆ, ಬೆಂಗಳೂರು ನಗರದ ಕೊಮ್ಮಘಟ್ಟದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಏಕಕಾಲದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಿದರು.ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗಳು ಮತ್ತು ಎನ್‌ಎಚ್‌ಎಐ (NHAI) ಯೋಜನೆಗಳ ಪ್ರದರ್ಶನ ವೀಕ್ಷಿಸಿದ ನಂತರ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಯಲಹಂಕ- ಪೆನುಕೊಂಡ ಮತ್ತು ಅರಸೀಕೆರೆ-ತುಮಕೂರು ಜೋಡಿ ರೈಲು ಮಾರ್ಗ ಮತ್ತು 100% ವಿದ್ಯುದೀಕರಣಗೊಂಡ ಕೊಂಕಣ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಬೆಂಗಳೂರು ಉಪ ನಗರ ರೈಲು ಯೋಜನೆ, ಬೆಂಗಳೂರು ಕಂಟೋನ್‌ಮೆಂಟ್ ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ, ಬೆಂಗಳೂರಿನ ವರ್ತುಲ ರಸ್ತೆ-2 ಪ್ಯಾಕೇಜ್‌ಗಳು, ನೆಲಮಂಗಲ ತುಮಕೂರು ವಿಭಾಗದ 6-ಲೈನಿಂಗ್, ಎನ್‌ಎಚ್‌-73 ರ ಪುಂಜಾಲಕಟ್ಟೆಯಿಂದ ಚಾರ್ಮಾಡಿ ಭಾಗದವರೆಗೂ ರಸ್ತೆ ಅಗಲೀಕರಣ, NH-69 ರ ಮಧುಗಿರಿ-ಗೌರಿಬಿದನೂರು-ಚಿಕ್ಕಬಳ್ಳಾಪುರ ವಿಭಾಗದ ಪುನರ್ವಸತಿ ಮತ್ತು ಉನ್ನತೀಕರಣ, ಬೆಂಗಳೂರಿನಲ್ಲಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೆ, ತುಮಕೂರು, ಅರಸೀಕೆರೆ, ಯಲಹಂಕ, ರತ್ನಗಿರಿ, ಮಡಗಾಂವ್ ಮತ್ತು ಉಡುಪಿಗೆ ಹೊಸ ರೈಲು ಸೇವೆಗೆ ವಿಡಿಯೋ ಲಿಂಕ್‌ ಮೂಲಕ ಹಸಿರು ನಿಶಾನೆಯನ್ನು ತೋರಿದರು. ಬೆಂಗಳೂರು ಉಪ ನಗರ ರೈಲು ಯೋಜನೆಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೊಹ್ಲೋಟ್, ಕೇಂದ್ರ ಮಂತ್ರಿಗಳಾದ ಪ್ರಹ್ಲಾದ್ ಜೋಶಿ, ಸಂಸದರಾದ ಪಿ.ಸಿ.ಮೋಹನ್, ಡಿ.ವಿ.ಸದಾನಂದಗೌಡ, ತೇಜಸ್ವಿ ಸೂರ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್ ಸೇರಿದಂತೆ ಅಧಿಕಾರಿಗಳು, ಮತ್ತಿತರರ ಗಣ್ಯರು ಉಪಸ್ಥಿತರಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement