ನ್ಯಾಷನಲ್ ಹೆರಾಲ್ಡ್ ಪ್ರಕರಣ: ಜುಲೈ ಕೊನೆಯಲ್ಲಿ ಹೇಳಿಕೆ ದಾಖಲಿಸಲು ಸೋನಿಯಾ ಗಾಂಧಿಗೆ ಸೂಚಿಸಿದ ಇ.ಡಿ

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆಗೆ ಹಾಜರಾಗುವ ದಿನಾಂಕ ಮುಂದೂಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸಲ್ಲಿಸಿದ್ದ ಮನವಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಪುರಸ್ಕರಿಸಿದೆ.
ಕೋವಿಡ್ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಸೋನಿಯಾ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ವೈದ್ಯರು ಅವರಿಗೆ ಮನೆಯಲ್ಲಿಯೇ ಇದ್ದು ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದರಿಂದ ವಿಚಾರಣೆಗೆ ಹಾಜರಾಗುವ ದಿನಾಂಕ ಮುಂದೂಡವಂತೆ ಕೋರಿ ಸೋನಿಯಾ ಗಾಂಧಿ ಇಡಿಗೆ ಪತ್ರ ಬರೆದಿದ್ದರು.

ಈ ಪ್ರಕರಣ ಸಂಬಂಧ ಈಗ ಸೋನಿಯಾ ಅವರ ವಿಚಾರಣೆಯನ್ನು ನಾಲ್ಕು ವಾರಗಳ ವರೆಗೆ ಮುಂದೂಡಲಾಗಿದೆ. ಜುಲೈ ಕೊನೆ ವಾರದಲ್ಲಿ ಇ.ಡಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೋನಿಯಾ ಅವರಿಗೆ ಸೂಚಿಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.
ಸೋನಿಯಾ ಅವರಿಗೆ ಜೂನ್‌ 5ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಮೊದಲ ನೋಟಿಸ್‌ ನೀಡಿತ್ತು. ಸೋನಿಯಾ ಅವರಿಗೆ ಕೋವಿಡ್‌ ಸೋಂಕು ಇರುವುದು ದೃಢಪಟ್ಟ ನಂತರ ವಿಚಾರಣೆ ಮುಂದೂಡಿ, ಜೂನ್ 23ರಂದು ವಿಚಾರಣೆಗೆ ಹಾಜರಾಗುವಂತೆ ಇ.ಡಿ ಎರಡನೇ ಸಮನ್ಸ್‌ ನೀಡಿತ್ತು.
ಇದೇ ಪ್ರಕರಣ ಸಂಬಂಧ ರಾಹುಲ್‌ ಗಾಂಧಿ ಅವರನ್ನು ಇ.ಡಿ 5 ದಿನಗಳ ಕಾಲ, ಒಟ್ಟು 54 ಗಂಟೆ ವಿಚಾರಣೆ ನಡೆಸಿದೆ.

ಪ್ರಮುಖ ಸುದ್ದಿ :-   ಗದಗ: ನಾಲ್ವರು ಅಮಾಯಕರ ಕೊಲೆ ಪ್ರಕರಣ ಭೇದಿಸಿದ ಪೊಲೀಸರು, ತಂದೆ-ತಾಯಿ ಕೊಲೆಗೆ ಮಗನೇ ಸುಪಾರಿ ಕೊಟ್ಟಿದ್ದ...! 8 ಮಂದಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement