ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು, ಯಶ್ವಂತ ಸಿನ್ಹಾ ನಾಮಪತ್ರ ಕ್ರಮಬದ್ಧ, 107 ನಾಮಪತ್ರ ತಿರಸ್ಕೃತ

ನವದೆಹಲಿ: ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಈವರೆಗೆ 94 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿದ್ದ 115 ನಾಮಪತ್ರಗಳಲ್ಲಿ 107 ನಾಮಪತ್ರಗಳು ತಿರಸ್ಕೃತವಾಗಿವೆ.
ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ಪ್ರತಿ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರ ನಾಮಪತ್ರಗಳು ಕ್ರಮಬದ್ಧವಾಗಿದ್ದು, ಅಂತಿಮವಾಗಿ ಇವರಿಬ್ಬರು ಕಣದಲ್ಲಿ ಉಳಿಯಲಿದ್ದಾರೆ ಎಂದು ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಪಿ.ಸಿ.ಮೋದಿ ತಿಳಿಸಿದ್ದಾರೆ.

94 ಅಭ್ಯರ್ಥಿಗಳಿಂದ 115 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಅಗತ್ಯ ದಾಖಲೆಗಳಿರದ ಕಾರಣ 107 ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ. . ಆರ್‌ಬಿಐ ಮತ್ತು ಸರ್ಕಾರದ ಖಜಾನೆಗೆ 15 ಸಾವಿರ ರೂ. ಠೇವಣಿ ಇಡದ ಕಾರಣಕ್ಕೆ ಬಹುತೇಕ ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತವಾಗಿವೆ. ಆರ್‌ಜೆಡಿ ಸಂಸ್ಥಾಪಕ ಲಾಲು ಪ್ರಸಾದ್ ಯಾದವ್ ಅವರ ಹೆಸರಿನ ವ್ಯಕ್ತಿಯೊಬ್ಬರು, ದೆಹಲಿಯ ಪ್ರೊಫೆಸರ್, ತಮಿಳುನಾಡಿನ ಸಾಮಾಜಿಕ ಹೋರಾಟಗಾರರೊಬ್ಬರು ಹಾಗೂ ಮುಂಬೈ ಕೊಳೆಗೇರಿಯ ನಿವಾಸಿಯೊಬ್ಬರು ನಾಮಪತ್ರ ಸಲ್ಲಿಸಿದ್ದರು. ದ್ರೌಪದಿ ಮುರ್ಮು ಮತ್ತು ಸಿನ್ಹಾ ಅವರು ತಲಾ 4 ಪ್ರತಿಗಳಲ್ಲಿ ನಾಮಪತ್ರ ಸಲ್ಲಿಸಿದ್ದು, ಕ್ರಮಬದ್ಧವಾಗಿರುವುದರಿಂದ ಈ ಇಬ್ಬರ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಾಮಪತ್ರ ಹಿಂಪಡೆಯಲು ಜುಲೈ 2 ಅಂತಿಮ ದಿನವಾಗಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರಮುಖ ಸುದ್ದಿ :-   ಮಣಿಪುರ | ಸರ್ಕಾರ ರಚಿಸಲು 44 ಶಾಸಕರು ಸಿದ್ಧ ; ರಾಜ್ಯಪಾಲರ ಭೇಟಿ ಬಳಿಕ ಬಿಜೆಪಿ ನಾಯಕನ ಹೇಳಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement