ಸ್ವೀಡನ್ : 2020 ರ ಒಲಿಂಪಿಕ್ ನಲ್ಲಿ ಭಾರತಕ್ಕೆ ಚಿನ್ನ ತಂದು ಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಜೂನ್ 30 ರಂದು ಸ್ಟಾಕ್ಹೋಮ್ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ನಲ್ಲಿ 89.94 ಮೀ. ಜಾವೆಲಿನ್ ಎಸೆಯುವ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಮಾಡಿದ್ದು, ಆದರೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಜೂನ್ ತಿಂಗಳ ಆರಂಭದಲ್ಲಿ ತುರ್ಕುದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್ನಲ್ಲಿ ನೀರಜ್ 89.30 ಮೀ. ಜಾವೆಲಿನ್ ಎಸೆಯುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದಿದ್ದರು. ಈಗ ತಿಂಗಳಲ್ಲಿ ಎರಡನೇ ಬಾರಿಗೆ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ.
ಗುರುವಾರ ನಡೆದ ಡೈಮಂಡ್ ಲೀಗ್ನಲ್ಲಿ ಗ್ರೆನಡಾದ ಹಾಲಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ತಮ್ಮ ಮೂರನೇ ಪ್ರಯತ್ನದಲ್ಲಿ 90.31 ಮೀ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಡೈಮಂಡ್ ಟ್ರೋಫಿ ಮತ್ತು 40,000 ಸಾವಿರ ಡಾಲರ್ ಪಡೆದರು. ನೀರಜ್ ಚೋಪ್ರಾ ಈ ಲೀಗ್ ನಲ್ಲಿ 90 ಮೀಟರ್ ಎಸೆಯುವ ವಿಶ್ವಾಸ ವ್ಯಕ್ತಪಡಿಸಿದ್ದರು. 89.94 ಮೀ. ಎಸೆದರು.
ಗ್ರೆನಾಡಾದ ಅಥ್ಲೀಟ್, ಆಂಡರ್ಸನ್ ಪೀಟರ್ಸ್ 90.31 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಿನ್ನದ ಪದಕ ತನ್ನದಾಗಿಸಿಕೊಂಡರು. ಪ್ರಸಕ್ತ ಸೀಸನ್ನಲ್ಲಿ ಈ ಪಂದ್ಯಕ್ಕೂ ಮುನ್ನ ಎರಡು ಬಾರಿ ಅವರು 90 ಮೀಟರಿಗಿಂತ ಅಧಿಕ ದೂರಕ್ಕೆ ಈಟಿ ಎಸೆದಿದ್ದಾರೆ. ಡೈಮಂಡ್ ಲೀಗ್ನ ದೋಹಾ ಲೆಗ್ನಲ್ಲಿ 93.07 ಮೀಟರ್ ಹಾಗೂ ನೆದರ್ಲೆಂಡ್ಸ್ನ ಹೆಂಗೆಲೊದಲ್ಲಿ 90.75 ಮೀಟರ್ ದೂರಕ್ಕೆ ಈಟಿ ಎಸೆದಿದ್ದಾರೆ.
ಮಿಕ್ಕಂತೆ ಜರ್ಮನಿಯ ಜ್ಯೂಲಿಯನ್ ವೆಬೆರ್ 89.08 ಮೀಟರ್ ಎಸೆದು ಕಂಚಿನ ಪದಕ ಪಡೆದರೆ ಟೋಕಿಯೊ ಒಲಿಂಪಿಕ್ ಬೆಳ್ಳಿಪದಕ ವಿಜೇತ ಜಾಕುಬ್ ವದ್ಲೆಜೆಚ್ 88.59 ಮೀಟರ್ ಎಸೆಯುವ ಮೂಲಕ 4 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಚೋಪ್ರಾ ವಿಶ್ವ ಚಾಂಪಿಯನ್ಶಿಪ್ಗೆ ಮುನ್ನ ಮೂರು ಪಂದ್ಯಗಳನ್ನು ಹೊಂದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ