ಆಲ್ಟ್‌ ನ್ಯೂಸ್‌ನ ಜುಬೇರ್ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್‌: 14 ದಿನ ನ್ಯಾಯಾಂಗ ಬಂಧನ

ನವದೆಹಲಿ : ಹಿಂದೂ ದೇವತೆ ಕುರಿತ ಆಕ್ಷೇಪಾರ್ಹ ಟ್ವೀಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧತನಾಗಿರುವ ಆಲ್ಟ್‌ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್‌ಗೆ ದೆಹಲಿ ನ್ಯಾಯಾಲಯವು ಜಾಮೀನು ನಿರಾಕರಿಸಿದೆ ಹಾಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯನ್ನು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎದುರು ಶನಿವಾರ ಹಾಜರುಪಡಿಸಲಾಯಿತು. ಆತನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಪ್ಪಿಸುವಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಕೋರಿ ಜುಬೇರ್ ಸಹ ಅರ್ಜಿ ಸಲ್ಲಿಸಿದ್ದ. ಆದರೆ ಪೊಲೀಸರ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿತು.
ತನ್ನ ಬಂಧನದ ಕಾನೂನು ಬದ್ದತೆ ಪ್ರಶ್ನಿಸಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್‌ ಪೊಲೀಸರಿಂದ ಪ್ರತಿಕ್ರಿಯೆ ಕೇಳಿತ್ತು. ಆದರೆ ಪಾಕಿಸ್ತಾನ ಸೇರಿದಂತೆ ವಿದೇಶಗಳಿಂದ ಪಡೆದ ದೇಣಿಗೆ ಬಗ್ಗೆ ತನಿಖೆ ನಡೆಸುತ್ತಿರುವುದರಿಂದ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಶನ್ ಮನವಿ ಮಾಡಿತ್ತು.

ಜುಬೈರ್ ನಿರ್ದೇಶಕನಾಗಿರುವ ಆಲ್ಟ್ ನ್ಯೂಸ್‌ನ ಮೂಲ ಕಂಪನಿಯಾದ ಪ್ರಾವ್ಡಾ ಮೀಡಿಯಾ ವಿವಿಧ ವಹಿವಾಟುಗಳ ಮೂಲಕ 2 ಲಕ್ಷ ರೂ.ಗಳಿಗೂ ಹೆಚ್ಚು ಹಣ ಪಡೆದ ಮೊಬೈಲ್ ಫೋನ್ ಸಂಖ್ಯೆ ಅಥವಾ ಐಪಿ ವಿಳಾಸ ವಿದೇಶಿಗಳದ್ದಾಗಿದೆ ಎಂದು ದೆಹಲಿ ಪೊಲೀಸ್ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್‌ಗೆ ಮಾಹಿತಿ ನೀಡಿದರು. ದೇಣಿಗೆಗಳು ಪಾಕಿಸ್ತಾನ, ಸಿರಿಯಾದಿಂದ ಬಂದಿವೆ, ಆದ್ದರಿಂದ ಇದು ಕೇವಲ ಸರಳ ಟ್ವೀಟ್‌ನ ಪ್ರಕರಣವಲ್ಲ. ಆರೋಪಿ ಪ್ರಾವ್ಡಾ ಮೀಡಿಯಾ ನಿರ್ದೇಶಕರಾಗಿದ್ದು, ಎಲ್ಲವನ್ನೂ ಜಾಣತನದಿಂದ ಅಳಿಸಿ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಜುಬೈರ್‌ಗೆ ಯಾವುದೇ ಸಂದರ್ಭದಲ್ಲೂ ಜಾಮೀನು ನೀಡಬಾರದು ಎಂದು ಪೊಲೀಸರು ವಾದಿಸಿದರು.
ಜುಬೈರ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ) ಮತ್ತು 201 (ಸಾಕ್ಷ್ಯ ನಾಶ) ಮತ್ತು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆಯ ಸೆಕ್ಷನ್ 35 ಅಡಿ ಹೊಸದಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
ಹಿಂದೂ ದೇವತಗಳ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಜೂನ್ 27 ರಂದು ಜುಬೇರ್‌ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement