2002ರ ಗೋಧ್ರಾ ರೈಲು ಹತ್ಯಾಕಾಂಡದ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ

ಗೋಧ್ರಾ (ಗುಜರಾತ್) : 2002ರಲ್ಲಿ ಗುಜರಾತಿನಲ್ಲಿ ಭೀಕರ ಗಲಭೆಗೆ ಕಾರಣವಾಗಿದ್ದ 59 ಕರಸೇವಕರನ್ನು ಹತ್ಯೆಗೈದ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣದ ಆರೋಪಿಗೆ ಗೋಧ್ರಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಗೋಧ್ರಾದಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯವು, ಫೆಬ್ರವರಿ 2021 ರಲ್ಲಿ ಬಂಧಿಸಲ್ಪಟ್ಟ ಆರೋಪಿ ರಫೀಕ್ ಹುಸೇನ್ ಬಟುಕ್‌ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ತಲೆಮರೆಸಿಕೊಂಡಿದ್ದ ರಫೀಕ್‌ನನ್ನು ಕಳೆದ ವರ್ಷ ಬಂಧಿಸಲಾಗಿತ್ತು. ನಂತರ ಪ್ರಕರಣದಲ್ಲಿ ಅವರ ವಿರುದ್ಧ ವಿಚಾರಣೆ ಪ್ರಾರಂಭವಾಗಿತ್ತು. ಫೆಬ್ರವರಿ 27, 2002 ರಂದು ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಿ 59 ಮಂದಿಯನ್ನು ಕೊಂದ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣವಾಗಿತ್ತು. ಗಲಭೆಯಲ್ಲಿ 1,200 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದರು.

ಈ ಪ್ರಕರಣದಲ್ಲಿ ನ್ಯಾಯಾಲಯದಿಂದ ಇದುವರೆಗೆ ತಪ್ಪಿತಸ್ಥರೆಂದು ಪರಿಗಣಿಸಲ್ಪಟ್ಟ 35 ನೇ ಆರೋಪಿ ಬಟುಕ್ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆರ್‌ಸಿ ಕೊಡೇಕರ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲ್ಪಟ್ಟ ನಂತರ ಬಟುಕ್‌ ಅವರು ಗೋಧ್ರಾದಿಂದ ಪರಾರಿಯಾಗಿದ್ದರು. ಪಂಚಮಹಲ್ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಕಳೆದ ವರ್ಷ ಫೆಬ್ರವರಿಯಲ್ಲಿ ಗೋಧ್ರಾ ಪಟ್ಟಣದ ಪ್ರದೇಶದಿಂದ ಬಟುಕ್‌ನನ್ನು ಬಂಧಿಸಿತು. ಇದಕ್ಕೂ ಮೊದಲು, ವಿಶೇಷ ಎಸ್‌ಐಟಿ ನ್ಯಾಯಾಲಯವು ಮಾರ್ಚ್ 1, 2011 ರಂದು ಪ್ರಕರಣದಲ್ಲಿ 31 ಜನರನ್ನು ದೋಷಿ ಎಂದು ಘೋಷಿಸಿತ್ತು. ಅವರಲ್ಲಿ 11 ಜನರಿಗೆ ಮರಣದಂಡನೆ ಮತ್ತು 20 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
2017 ರ ಅಕ್ಟೋಬರ್‌ನಲ್ಲಿ ಗುಜರಾತ್ ಹೈಕೋರ್ಟ್ 11 ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿತು. ಆದರೆ, ವಿಶೇಷ ಎಸ್‌ಐಟಿ ನ್ಯಾಯಾಲಯವು ಇತರ 20 ಜನರಿಗೆ ನೀಡಿದ್ದ ಶಿಕ್ಷೆಯನ್ನು ಎತ್ತಿಹಿಡಿಯಿತು. ನಂತರ, ಎರಡು ಸಂದರ್ಭಗಳಲ್ಲಿ ಪ್ರಕರಣದಲ್ಲಿ ಇನ್ನೂ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement