ಜುಲೈ 11ರಿಂದ ಪದವಿ ಕಾಲೇಜು ದಾಖಲಾತಿ ಆರಂಭ: ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಕೆ: ಡಾ. ಅಶ್ವತ್ಥ ನಾರಾಯಣ

ಬೆಂಗಳೂರು: ಪದವಿ ಕಾಲೇಜುಗಳಿಗೆ ಜುಲೈ 11ರಿಂದ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ ಹಾಗೂ ಎಲ್ಲವೂ ಆನ್ ಲೈನ್ ನಲ್ಲಿ ನಡೆಯಲಿದೆ ಎಂದರು. ವಿದ್ಯಾರ್ಥಿಗಳು ಸಿಂಗಲ್ ಲಾಗಿನ್‌ನಿಂದಲೇ ಯಾವ ಕಾಲೇಜಿಗೆ ಬೇಕಾದರೂ ಅರ್ಜಿ ಹಾಕಬಹುದು.
ಅರ್ಜಿ ಸಲ್ಲಿಸಲು ಬೇರೆ ಬೇರೆ ಸಂಸ್ಥೆಗಳಿಗೆ ಓಡಾಡುವ ಅಗತ್ಯ ಇಲ್ಲ. ಪಿಯುಸಿ ನಂಬರ್ ಹಾಕಿದರೆ ಆಂಕಪಟ್ಟಿಗೆ ಸಂಬಂಧಿಸಿದ ಮಾಹಿತಿ ಸಿಗಲಿದೆ. ಉಳಿದಂತೆ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ ಇತ್ಯಾದಿಗಳು ಕೂಡ ಆಧಾರ್ ದೃಢೀಕರಣದಿಂದ ಸಿಗಲಿವೆ ಎಂದು ಅವರು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಎರಡನೇ ವರ್ಷಕ್ಕೆ ಬೇಕಾದ ಪಠ್ಯಕ್ರಮದ ಬಗ್ಗೆ ಇತ್ತೀಚೆಗೆ ಕುಲಪತಿಗಳ ಸಭೆ ನಡೆಸಲಾಗಿದೆ. ಮೊದಲನೇ ವರ್ಷದಲ್ಲಿ ಎನ್ ಇ ಪಿ 2020 ಅನುಷ್ಠಾನವನ್ನು ಪರಿಣಾಮಕಾರಿಯಾಗಿಸುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.
ಈಗ ವಿಶ್ವ ವಿದ್ಯಾಲಯಗಳ ಮೂಲಕ ಸರ್ಕಾರಕ್ಕೆ ಭೌತಿಕ ಕಡತ ಸಲ್ಲಿಸುವ ಅವಕಾಶ ನಿರಾಕರಿಸಲಾಗಿದೆ. ಈಗ ಕಡತಗಳು ಇ-ಆಫೀಸ್ ಮೂಲಕವೇ ಬರುತ್ತಿದ್ದು, 32,000 ಇ- ಕಡತಗಳು ಸೃಜನೆಗೊಂಡಿವೆ. 11 ಲಕ್ಷ ವಿದ್ಯಾರ್ಥಿಗಳಿಗೆ 1600 ಕೋಟಿ ರೂ.ಗಳನ್ನು ಪೋರ್ಟಲ್ ಮೂಲಕ ಅವರವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ ಎಂದು ಹೇಳಿದರು.
ಐಐಎಂ ಮಾದರಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಡಾ.ವಾಸುದೇವ ಅತ್ರೆ ಸಮಿತಿ ವರದಿ ಕೊಟ್ಟಿದೆ. ಇದರ ಪ್ರಕಾರ ಹೊಸ ಕಾಯ್ದೆ ರಚಿಸಲು ಉದ್ದೇಶಿಸಿದ್ದು ಅದನ್ನು ಸಾರ್ವಜನಿಕರ ಅವಗಾಹನೆಗಾಗಿ ಉನ್ನತ ಶಿಕ್ಷಣ ಇಲಾಖೆ ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಸಾರ್ವಜನಿಕರು ಹೊಸ ಕಾಯ್ದೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು ಎಂದರು.
ರಾಜ್ಯದ 440 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 100 ಸರ್ಕಾರಿ ಪಾಲಿಟೆಕ್ನಿಕ್ ಹಾಗೂ 14 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಂಗ್ರಹವಾಗುವ ಶುಲ್ಕವನ್ನು ಇನ್ನು ಮುಂದೆ ಕಾಲೇಜುಗಳಲ್ಲೇ ಬಳಸಲು ಅವಕಾಶ ನೀಡಲಾಗಿದೆ. ಸ್ವಾತಂತ್ರ್ಯ ಬಂದ ಮೇಲೆ ಇದೇ ಮೊದಲು ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ. ಅದರಿಂದ ಕಾಲೇಜುಗಳಲ್ಲಿನ ಸಣ್ಣಪುಟ್ಟ ಖರ್ಚುಗಳಿಗೆ ಅನುಕೂಲ ಆಗಲಿದೆ ಎಂದರು.

ಪ್ರಮುಖ ಸುದ್ದಿ :-   ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement