ಮಹಾರಾಷ್ಟ್ರದಲ್ಲಿ ಅಫ್ಘಾನ್ ಮೂಲದ ಮುಸ್ಲಿಂ ಧಾರ್ಮಿಕ ಮುಖಂಡನ ಗುಂಡಿಕ್ಕಿ ಹತ್ಯೆ

ಮುಂಬೈ: ಮಂಗಳವಾರ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಯೋಲಾ ಪಟ್ಟಣದಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳ ಗುಂಪೊಂದು ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡನನ್ನು ಗುಂಡಿಕ್ಕಿ ಕೊಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
35 ವರ್ಷದ ಧಾರ್ಮಿಕ ಮುಖಂಡ ಅಫ್ಘಾನಿಸ್ತಾನದ ಪ್ರಜೆಯಾಗಿದ್ದು, ಪೊಲೀಸರ ಆರಂಭಿಕ ತನಿಖೆಯ ಪ್ರಕಾರ, ‘ಸೂಫಿ ಬಾಬಾ’ ಎಂದೇ ಖ್ಯಾತರಾಗಿರುವ ಖ್ವಾಜಾ ಸಯ್ಯದ್ ಚಿಶ್ತಿ ಅವರ ಹತ್ಯೆಯ ಹಿಂದಿನ ಉದ್ದೇಶ ಇನ್ನೂ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.
ಮುಂಬೈನಿಂದ ಸುಮಾರು 200 ಕಿಮೀ ದೂರದಲ್ಲಿರುವ ಯೋಲಾ ಪಟ್ಟಣದ ಎಂಐಡಿಸಿ ಪ್ರದೇಶದ ತೆರೆದ ಪ್ಲಾಟ್‌ನಲ್ಲಿ ಸಂಜೆ ಈ ಘಟನೆ ನಡೆದಿದೆ. ದಾಳಿಕೋರರು ಅವರ ಹಣೆಗೆ ಬಂದೂಕಿನಿಂದ ಗುಂಡು ಹಾರಿಸಿದ ನಂತರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಂತರ, ದಾಳಿಕೋರರು ಅವರು ಪ್ರಯಾಣಿಸುತ್ತಿದ್ದ ಎಸ್‌ಯುವಿ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಯೋಲಾ ಪೊಲೀಸ್ ಠಾಣೆಯಲ್ಲಿ ಕೊಲೆಯ ಅಪರಾಧವನ್ನು ದಾಖಲಿಸಲಾಗಿದೆ ಮತ್ತು ಹಂತಕರನ್ನು ಹಿಡಿಯಲು ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement