ಮಹಾರಾಷ್ಟ್ರ ಬಿಕ್ಕಟ್ಟು: ಎರಡೂ ಬಣದ ಶಿವಸೇನೆಯ ಶಾಸಕರ ಅನರ್ಹತೆಯ ಪ್ರಕ್ರಿಯೆಗೆ ಸುಪ್ರೀಂಕೋರ್ಟ್‌ ತಡೆ

ನವದೆಹಲಿ: ಮಹಾರಾಷ್ಟ್ರದ ಬಿಕ್ಕಟ್ಟಿನಲ್ಲಿ ಭಾಗಿಯಾಗಿರುವ ಎರಡೂ ಬಣಗಳ ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.
ಉದ್ಧವ್ ಠಾಕ್ರೆ ಬಣದ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಏಕನಾಥ್ ಶಿಂಧೆ ಅವರ 39 ಶಾಸಕರ ಅನರ್ಹತೆಗೆ ಸಂಬಂಧಿಸಿದ ಪ್ರಕರಣ ಜುಲೈ 11 ರಂದು ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ ಜೂನ್‌ 27 ರಂದು ಹೇಳಿದೆ ಎಂದರು. ಆದರೆ, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಪಕ್ಷಗಳನ್ನು ಆಲಿಸಿದ ನಂತರ ಈ ವಿಷಯ ಮಾತ್ರ ನಿರ್ಧರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣವನ್ನು ನಿರ್ಧರಿಸಲು ಹೊಸ ಪೀಠವನ್ನು ರಚಿಸುವವರೆಗೆ ಶಾಸಕರ ವಿರುದ್ಧ ಯಾವುದೇ ಕ್ರಮ ಅಥವಾ ವಿಚಾರಣೆಯನ್ನು ತೆಗೆದುಕೊಳ್ಳಬಾರದು ಎಂದು ಸ್ಪೀಕರ್‌ಗೆ ತಿಳಿಸುವಂತೆ ಸುಪ್ರೀಂಕೋರ್ಟ್‌ ಅರ್ಜಿದಾರರಿಗೆ ಸೂಚಿಸಿದೆ.
ರಾಜ್ಯಪಾಲರ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಈ ಕುರಿತು ಸ್ಪೀಕರ್‌ಗೆ ತಿಳಿಸುವುದಾಗಿ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದರು.

ಏನಿದು ಪ್ರಕರಣ?
ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಕನಿಷ್ಠ ನಾಲ್ಕು ಅರ್ಜಿಗಳು ಬಾಕಿ ಉಳಿದಿವೆ. ಉದ್ಧವ್ ಠಾಕ್ರೆ ಬಣದ ಶಿವಸೇನಾ ಶಾಸಕ ಸುನಿಲ್ ಪ್ರಭು ಸಲ್ಲಿಸಿದ ಅರ್ಜಿಗಳ ಮೇಲೆ ಮಹಾರಾಷ್ಟ್ರ ವಿಧಾನಸಭೆಯ ಉಪ ಸ್ಪೀಕರ್ ಆರಂಭಿಸಿದ ಅನರ್ಹತೆಯ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಏಕನಾಥ್ ಶಿಂಧೆ ಅವರ ಶಾಸಕರ ಶಿಬಿರವು ಸಲ್ಲಿಸಿದ ಎರಡು ಅರ್ಜಿಗಳು ಇದರಲ್ಲಿ ಸೇರಿವೆ.
ಪ್ರಭು ಸಲ್ಲಿಸಿದ ಅರ್ಜಿಯೊಂದು, ವಿಶ್ವಾಸಮತ ಪರೀಕ್ಷೆ ನಡೆಸಲು ರಾಜ್ಯಪಾಲರು ವಿಧಾಸಭೆ ಕರೆದಿರುವುದು ಕಾನೂನು ಬಾಹಿರ ಎಂದು ಅದನ್ನು ಪ್ರಶ್ನಿಸಿದ್ದಾರೆ. ಅಜಯ್ ಚೌಧರಿ ಮತ್ತು ಸುನೀಲ್ ಪ್ರಭು ಅವರನ್ನು ಕ್ರಮವಾಗಿ ಪಕ್ಷದ ನಾಯಕ ಮತ್ತು ಶಿವಸೇನಾ ಶಾಸಕಾಂಗ ಪಕ್ಷದ ಮುಖ್ಯ ಸಚೇತಕ ಹುದ್ದೆಯಿಂದ ತೆಗೆದುಹಾಕಿರುವ ಸ್ಪೀಕರ್ ಆದೇಶವನ್ನು ಸುನಿಲ ಪ್ರಭು ಸಲ್ಲಿಸಿದ ಮತ್ತೊಂದು ಅರ್ಜಿ ಪ್ರಶ್ನಿಸಿದೆ.
ಜೂನ್ 27 ರಂದು, ಉಪ ಸ್ಪೀಕರ್ ಕಳುಹಿಸಿರುವ ಅನರ್ಹತೆಯ ನೋಟಿಸ್‌ಗೆ ಪ್ರತಿಕ್ರಿಯೆ ಸಲ್ಲಿಸಲು ಸಮಯವನ್ನು ವಿಸ್ತರಿಸುವ ಮೂಲಕ ಶಿಂಧೆ ಮತ್ತು ಅವರ ಬಂಡಾಯ ಶಾಸಕರ ಗುಂಪಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಪರಿಹಾರವನ್ನು ನೀಡಿತು. ಪ್ರತಿಕ್ರಿಯೆ ಸಲ್ಲಿಸಲು ಜುಲೈ 12 ಕೊನೆಯ ದಿನವಾಗಿದೆ.
ಜೂನ್ 29 ರಂದು, ರಾಜ್ಯಪಾಲರು ಕರೆದಿದ್ದ ಮಹತ್ತರ ಬಹುಮತ ಸಾಬೀತು ಪರೀಕ್ಷೆಗೆ ನ್ಯಾಯಾಲಯವು ಸಹ ಅನುಮತಿ ನೀಡಿತು, ಅದರ ನಂತರ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು ಮತ್ತು ಏಕನಾಥ್ ಶಿಂಧೆ ನೇತೃತ್ವದ ಹೊಸ ಸರ್ಕಾರವು ಪ್ರಮಾಣವಚನ ಸ್ವೀಕರಿಸಿತು.

ಪ್ರಮುಖ ಸುದ್ದಿ :-   ಸುಪ್ರೀಂ ಕೋರ್ಟ್ ತರಾಟೆ ನಂತರ ದೊಡ್ಡದಾಗಿ ಕ್ಷಮೆಯಾಚನೆ ಪ್ರಕಟಿಸಿದ ಪತಂಜಲಿ ಸಂಸ್ಥೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement