ಹೊಸದಿಲ್ಲಿ: ಬುಡಕಟ್ಟು ಮಕ್ಕಳ ಶಿಕ್ಷಣದ ಹೆಸರಿನಲ್ಲಿ ಸಂಗ್ರಹಿಸಿದ ಸುಮಾರು ₹ 13 ಕೋಟಿಯನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತೆ ಹಾಗೂ ‘ನರ್ಮದಾ ಬಚಾವೋ’ ಆಂದೋಲನದ ಸಂಸ್ಥಾಪಕಿ ಮೇಧಾ ಪಾಟ್ಕರ್ ಮತ್ತು ಇತರ 11 ಜನರ ವಿರುದ್ಧ ಮಧ್ಯಪ್ರದೇಶ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿದ್ದಾರೆ.
ನರ್ಮದಾ ನವನಿರ್ಮಾಣ ಅಭಿಯಾನ ಟ್ರಸ್ಟ್ ಸಂಗ್ರಹಿಸಿದ ಹಣವನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ಮೇಧಾ ಪಾಟ್ಕರ್ ಈ ಆರೋಪವನ್ನು ತಳ್ಳಿಹಾಕಿದ್ದು, ದೂರುದಾರರು ಆಡಳಿತಾರೂಢ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ನ ವಿದ್ಯಾರ್ಥಿ ವಿಭಾಗದ ಸದಸ್ಯರಾಗಿದ್ದಾರೆ ಎಂದು ಹೇಳಿದ್ದಾರೆ.
ಬರ್ವಾನಿ ಜಿಲ್ಲೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ರ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ಅನ್ನು ದಾಖಲಿಸಲಾಗಿದೆ.
ಮೇಧಾ ಪಾಟ್ಕರ್ ಅವರು ನರ್ಮದಾ ನವನಿರ್ಮಾಣ ಅಭಿಯಾನ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ. ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಬುಡಕಟ್ಟು ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣವನ್ನು ಒದಗಿಸಲು ಹಾಗೂ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ವಸತಿ ಶಾಲೆಗಳನ್ನು ಒದಗಿಸಲು ಎಂದು ಸೋಗು ಹಾಕಿಕೊಂಡು ಮೇಧಾ ಪಾಟ್ಕರ್ ಜನರನ್ನು ದಾರಿತಪ್ಪಿಸಿದ್ದಾರೆ ಎಂದು ಆರೋಪಿಸಿ ಪ್ರೀತಮ್ ರಾಜ್ ಬಡೋಲೆ ಎಂಬ ದೂರುದಾರರು ಎಫ್‌ಐಆರ್ ದಾಖಲಿಸಿದ್ದಾರೆ
ಏತನ್ಮಧ್ಯೆ, ಕಾರ್ಯಕರ್ತೆ ತನ್ನ ವಿರುದ್ಧದ ಆರೋಪಗಳನ್ನು ತಳ್ಳಿಹಾಕಿದರು ಮತ್ತು ಪೊಲೀಸರಿಂದ ಯಾವುದೇ ಅಧಿಕೃತ ಸೂಚನೆಯನ್ನು ಪಡೆದಿಲ್ಲವಾದರೂ, ಪ್ರತಿ ಆರೋಪಕ್ಕೂ ಉತ್ತರಿಸಲು ಸಿದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.
ದೂರುದಾರರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕರಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪ್ರತಿಪಾದಿಸಿದ ಪಾಟ್ಕರ್, “ಹಣಕಾಸಿನ ಸ್ಥಿತಿಗೆ ಸಂಬಂಧಿಸಿದ ಪ್ರತಿ ಪ್ರಶ್ನೆಗೆ ಆಡಿಟ್ ವರದಿ ಲಭ್ಯವಿದೆ. ನಾವು ವಿದೇಶಿ ಹಣವನ್ನು ಸ್ವೀಕರಿಸುವುದಿಲ್ಲ ಮತ್ತು ಯಾವಾಗಲೂ ನಮ್ಮ ಬ್ಯಾಂಕ್ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡುವ ಕಾರಣ ನಾವು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿರುದ್ಧದ ಪ್ರಕರಣವನ್ನು ಗೆದ್ದಿದ್ದೇವೆ. ಭವಿಷ್ಯದಲ್ಲಿಯೂ ನಾವು ಉತ್ತರವನ್ನು ನೀಡುತ್ತೇವೆ ಮತ್ತು ಸಾಕ್ಷ್ಯವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
“ಜನರ ಜೀವನೋಪಾಯಕ್ಕೆ ಸಹಾಯ ಮಾಡಲು ನಾವು ಹಣವನ್ನು ಬಳಸಿದ್ದೇವೆ ಮತ್ತು ಅದನ್ನು ಮಾಡುತ್ತಲೇ ಇರುತ್ತೇವೆ. ಈ ಹಿಂದೆಯೂ ಇಂತಹ ಆರೋಪಗಳನ್ನು ನಾವು ಎದುರಿಸಿದ್ದೇವೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ