ಬೆಳಗಾವಿ: ಪಶ್ಚಿಮ ಬಂಗಾಳದಲ್ಲಿ ಕಾರ್ಯನಿರ್ವಹಿಸುತಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಿಎಸ್ಎಫ್ ಯೋಧ ಸೂರಜ ಧೋಂಡಿರಾಮ ಸುತಾರ (30) ಅವರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಅವರು ಪಶ್ಚಿಮ ಬಂಗಾಳದ ಪಂಜಿ ಪಾಡದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಗಡಿಭದ್ರತಾ ಪಡೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಸೋಮವಾರ ಬೆಳಗ್ಗೆ ಪತ್ನಿಯೊಂದಿಗೆ ಸೇವಾ ಸ್ಥಳಕ್ಕೆ ಹೋಗುತ್ತಿದ್ದರು. ಈ ಸಮಯದಲ್ಲಿ ರಿಕ್ಷಾದಿಂದ ಕೆಳಗಿಳಿಯುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಯೋಧ ಧೋಂಡಿರಾಮ ಸುತಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣವನ್ನು ಮುಗಿಸಿದ್ದರು. 2012ರಲ್ಲಿ ಭಾರತೀಯ ಸೇನೆ ಬಿಎಸ್ಎಫ್ ಸೇನೆಗೆ ನೇಮಕಗೊಂಡಿದ್ದರು.
ಇವರ ಪಾರ್ಥಿವ ಶರೀರವು ನಾಳೆ ಪಶ್ಚಿಮ ಬಂಗಾಳದಲ್ಲಿ ಯಡೂರುವಾಡಿಗೆ ಬರಲಿದೆ ಎಂದು ವರದಿಗಳು ತಿಳಿಸಿವೆ.


ನಿಮ್ಮ ಕಾಮೆಂಟ್ ಬರೆಯಿರಿ