ಡೀಮ್ಡ್‌ ಅರಣ್ಯ ಸಂರಕ್ಷಣಾ ಯೋಜನೆ ರೂಪಿಸಿ ಜಾರಿ ಮಾಡಲು ಪರಿಸರ ಸಂಘಟನೆಗಳು, ತಜ್ಞರು ಒತ್ತಾಯ: ಸಿಎಂಗೆ ವೃಕ್ಷ ಲಕ್ಷ ಆಂದೋಲನದ ಶಿಫಾರಸು ಸಲ್ಲಿಕೆ

ಶಿರಸಿ: ವೃಕ್ಷ ಲಕ್ಷ ಆಂದೋಲನ ತಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಡೀಮ್ಡ್‌ ಅರಣ್ಯ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸಲು ಶನಿವಾರ ಮನವಿ ಮಾಡಿದೆ. ಇದೇವೇಳೆ ಅರಣ್ಯ ಸಚಿವ ಉಮೇಶ ಕತ್ತಿ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಅರಣ್ಯ ಪರಿಸರ ಇಲಾಖೆಯ ಅಪರ ಪ್ರಧಾನ ಕಾರ್ಯದರ್ಶಿ ಜಾವೇದ್ ಅಖ್ತರ್ ಹಾಗೂ ಕೇಂದ್ರ ಅರಣ್ಯ ಮಂತ್ರಾಲಯದ ದಕ್ಷಿಣ ಭಾರತ ಕಚೇರಿ ಮುಖ್ಯಸ್ಥ ಡಾ. ಕೆ.ಪಿ.ಸಿಂಗ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದು ಜೀವ ವೈವಿಧ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಅಶೀಸರ ತಿಳಿಸಿದ್ದಾರೆ.
ಈಗ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ೩೩೦೧೮೬ ಹೆಕ್ಟೇರ್ ಡೀಮ್ಡ್ ಅರಣ್ಯ ಸಂರಕ್ಷಣೆ ಮಾಡಲು ತಳಮಟ್ಟದಲ್ಲಿ ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸಬೇಕು. ಕಂದಾಯ ಇಲಾಖೆ ಸಹಕಾರ ಪಡೆದು ಡೀಮ್ಡ್ ಅರಣ್ಯ ಗುರುತಿಸಬೇಕು. ಬೇಲಿ, ಕಂದಕ ನಿರ್ಮಿಸಬೇಕು. ಮಲೆನಾಡು ದಟ್ಟ ಕಾನುಗಳನ್ನು ರಕ್ಷಿಸಲು ವನೀಕರಣ ಕೈಗೊಳ್ಳಲು ಬೃಹತ್ ಯೋಜನೆ ರೂಪಿಸಬೇಕು ಎಂದು ಡಾ. ಟಿ.ವಿ. ರಾಮಚಂದ್ರ, ಡಾ.ಕೇಶವ ಕೊರ್ಸೆ, ಡಾ. ರಾಮಕೃಷ್ಣ, ಪ್ರೊ. ಬಿ. ಎಂ. ಕುಮಾರ ಸ್ವಾಮಿ, ಡಾ. ಪ್ರಕಾಶ ಮೇಸ್ತ, ಡಾ. ಬಾಲಚಂದ್ರ ಸಾಯಿಮನೆ, ಕೆ. ವೆಂಕಟೇಶ, ಶ್ರೀಪಾದ ಬಿಚ್ಚುಗುತ್ತಿ ಮುಂತಾದ ಪರಿಸರ ಅರಣ್ಯ ತಜ್ಞರು ಒತ್ತಾಯಿಸಿದ್ದಾರೆ.

ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶದಂತೆ ೩೩೦೧೮೬ ಹೆಕ್ಟೇರ್ ಪ್ರದೇಶಗಳನ್ನು ಡೀಮ್ಡ್‌ ಫಾರೆಸ್ಟ್‌ (ಪರಿಭಾವಿತ ಅರಣ್ಯ ಪ್ರದೇಶಗಳು) ಎಂದು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿದೆ. ಈ ಆದೇಶದಲ್ಲೇ ಹೇಳಿರುವಂತೆ ಡೀಮ್ಡ್‌ ಅರಣ್ಯಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಸರ್ಕಾರ ಈ ಬಗ್ಗೆ ಸುಪ್ರೀಂಕೋರ್ಟಗೆ ಅಫಿಡವಿಟ್ ಕೂಡಾ ಸಲ್ಲಿಸಿದೆ ಎಂದು ಆದೇಶ ಹೇಳಿದೆ. ಸುಪ್ರೀಂಕೋರ್ಟ್‌ ಅಫಿಡವಿಟ್‌ ಸಲ್ಲಿಸಿರುವುದರಿಂದ ಅರಣ್ಯ ಕಾಯಿದೆಯ ಅಡಿಯಲ್ಲಿ ಈ ಡೀಮ್ಡ್ ಅರಣ್ಯಗಳ ರಕ್ಷಣೆಗೆ ಸರ್ಕಾರ ಕಡ್ಡಾಯವಾಗಿ ಮುಂದಾಗಲೇ ಬೇಕಾದ ಪರಿಸ್ಥಿತಿ ಇದೆ ಎಂಬುದನ್ನು ಪರಿಸರ ಕಾರ್ಯಕರ್ತರು ಒತ್ತಿ ಹೇಳಿದ್ದಾರೆ.
ಈ ಹಿಂದಿನ ತಜ್ಞರ ಸಮಿತಿ ವರದಿಯಲ್ಲಿ ೯೯೪೮೮೧ ಹೆಕ್ಟೇರ್ ಡೀಮ್ಡ್ ಅರಣ್ಯ ಪ್ರದೇಶ ಎಂದು ಗುರುತಿಸಿತ್ತು. ರಾಜ್ಯ ಸರ್ಕಾರದ ಪುರ‍್ರಚಿತ ತಜ್ಞರ ಸಮಿತಿ ಡೀಮ್ಡ್ ಮಾನದಂಡ ಅನ್ವಯಿಸದ ೭೭೩೩೨೬ ಹೆಕ್ಟೇರ್‌ಗಳನ್ನು ಕೈ ಬಿಟ್ಟಿತು. ಕೇವಲ ೩೩೦೧೮೬ ಹೆಕ್ಟೇರ್ ಡೀಮ್ಡ್ ಅರಣ್ಯ ಎಂದು ಈಗ ಘೋಷಿಸಲಾಗಿದೆ. ಕಳೆದ ೨೦ ವರ್ಷಗಳಲ್ಲಿ ಹಲವು ಬಾರಿ ಪರಿಶೀಲನೆಗೆ ಒಳಗಾಗಿ ಉಳಿದುಕೊಂಡ
ಕೇವಲ ೩೩% ಡೀಮ್ಡ್ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲೇಬೇಕಾದ ಗುರುತರ ಜವಾಬ್ದಾರಿ ಸರ್ಕಾರದ್ದು ಎಂದು ಗಮನ ಸೆಳೆಯಲಾಗಿದೆ.
ಇದೀಗ ೩೩೦೧೮೬ ಹೆಕ್ಟೇರ್ ಡೀಮ್ಡ್‌ ಅರಣ್ಯಗಳನ್ನು ತಳಮಟ್ಟದಲ್ಲಿ ಜತನವಾಗಿ ಕಾಪಾಡಬೇಕಾದ ಗುರುತರ ಜವಾಬ್ದಾರಿ ಸರ್ಕಾರದ್ದಾಗಿದೆ ಹಾಗೂ ಸ್ಥಳೀಯ ಜನರದ್ದಾಗಿದೆ. ಸರ್ಕಾರ ರಾಜ್ಯ ಅರಣ್ಯ ಇಲಾಖೆಗೆ ಡೀಮ್ಡ್‌ ಅರಣ್ಯಗಳ ರಕ್ಷಣೆಯ ನೇರ ಹೊಣೆಯನ್ನು ವಹಿಸಬೇಕು. ಕಂದಾಯ ಇಲಾಖೆ ಪೂರ್ಣ ಸಹಕಾರ ನೀಡಬೇಕು ಎಂದು ಸಲಹೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ಯೋಜನೆ ರೂಪಿಸಿ
ಗ್ರಾಮ ಅರಣ್ಯ ಸಮಿತಿ ರಚನೆಗಳ ಮೂಲಕ ಈ ಅರಣ್ಯ ಅಭಿವೃದ್ಧಿಯಲ್ಲಿ ಗ್ರಾಮಗಳ ಜನರ ಸಹಭಾಗಿತ್ವ ಪಡೆಯಬೇಕು. ಸ್ಥಳಿಯ ಪಂಚಾಯತ ಜೀವ ವೈವಿಧ್ಯ ಸಮಿತಿಗಳ ಸಹಕಾರ ಪಡೆಯಬೇಕು. ಡೀಮ್ಡ್‌ ಅರಣ್ಯ ಪ್ರದೇಶಗಳ ಜೀವ ವೈವಿಧ್ಯ ದಾಖಲಾತಿ, ಡೀಮ್ಡ್‌ ಅರಣ್ಯ ಪ್ರದೇಶ
ವ್ಯಾಪ್ತಿಯಲ್ಲಿ ಬರುವ ಕೆರೆ -ಹಳ್ಳಗಳು, ಜಲ ಮೂಲಗಳ ರಕ್ಷಣೆ ಹೀಗೆ ಹಲವು ಮುಖಗಳಲ್ಲಿ ಡೀಮ್ಡ್‌ ಅರಣ್ಯ ಅಭಿವೃದ್ಧಿಗಾಗಿ ಬಹುದೊಡ್ಡ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಲಾಗಿದೆ.

ಪಶ್ಚಿಮ ಘಟ್ಟದ ಡೀಮ್ಡ್‌ ಅರಣ್ಯ ಸೂಕ್ಷ್ಮವಾಗಿದೆ
ರಾಜ್ಯದ ಪಶ್ಚಿಮ ಘಟ್ಟದ ಜಿಲ್ಲೆಗಳ ಡೀಮ್ಡ್‌ ಅರಣ್ಯ ಪ್ರದೇಶಗಳಿಗೆ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಯಾಕೆಂದರೆ ಇಲ್ಲಿರುವ ಡೀಮ್ಡ್‌ ಅರಣ್ಯಗಳು ದಟ್ಟ ಕಾನುಗಳು, ದೇವರ ಕಾಡುಗಳು, ಪಾರಂಪರಿಕವಾಗಿ ಸ್ಥಳೀಯ ಜನರು ಗ್ರಾಮ ಸಾಮೂಹಿಕ ನೈಸರ್ಗಿಕ ಭೂಮಿ ಎಂದು ರಕ್ಷಿಸಿಕೊಂಡು ಬಂದಿದ್ದಾರೆ. ಇಲ್ಲಿ ವಿನಾಶದ ಅಂಚಿನ ಸಸ್ಯ ಪ್ರಭೇದಗಳಿವೆ. ವನ್ಯಜೀವಿಗಳಿವೆ. ರಾಂಪತ್ರೆ ಜಡ್ಡಿಗಳಿವೆ, ಜೇನು ಕಾಡುಗಳಿವೆ. ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಹಾಸನ, ಚಾಮರಾಜನಗರ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ಒಟ್ಟೂ ೧೬೫೯೦೫ ಹೆಕ್ಟೇರ್ ಡೀಮ್ಡ್‌ ಅರಣ್ಯ ಪ್ರದೇಶಗಳಿವೆ. (೦೫/೦೫/೨೦೨೨ ರ ಆದೇಶದಂತೆ) ಆದ್ದರಿಂದ ಈ ಜಿಲ್ಲೆಗಳಲ್ಲಿ ಈ ವರ್ಷವೇ ಡೀಮ್ಡ್‌ ಅರಣ್ಯ ಅಭಿವೃದ್ಧಿಗೆ ತಯಾರಿ ಶುರುವಾಗಬೇಕು. ಎಂದು ಒತ್ತಾಯಿಸಲಾಗಿದೆ.

ಪ್ರಮುಖ ಸುದ್ದಿ :-   ಶಿರಸಿ ; ಹಾಸ್ಟೆಲ್ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಬಾಲಕಿ

ಉನ್ನತಮಟ್ಟದ ಸಭೆ ಏರ್ಪಡಿಸಿ
ಡೀಮ್ಡ್‌ ಅರಣ್ಯ ಅಭಿವೃದ್ಧಿ ಸಮಿತಿ ರಚಿಸಿ ಸಮಾಲೊಚನಾ ಸಭೆ ಏರ್ಪಡಿಸಬೇಕು ಎಂದು ಸೂಚಿಸಲಾಗಿದೆ. ನವೆಂಬರ ೧ರ ರಾಜ್ಯೋತ್ಸವ ದಿನದಂದು ಯೋಜನೆಗೆ ನೇರ ಚಾಲನೆ ಸಿಗುವಂತೆ ವ್ಯಾಪಕ ತಯಾರಿ ನಡೆಸಲು ಕಾರ್ಯಪಡೆ
ರಚಿಸಬೇಕು ಎಂದು ಸಲಹೆ ನೀಡಲಾಗಿದೆ.
೩.೩೦ ಲಕ್ಷ ಹೆಕ್ಟೇರ್‌ ಡೀಮ್ಡ್ ಅರಣ್ಯ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ರಾಜ್ಯದ ಸುಸ್ಥಿರ ಅಭಿವೃದ್ಧಿ ನಿಸರ್ಗ ಸಂಪತ್ತಿನ ಉಳಿವಿಗೆ ದೇಶದಲ್ಲೇ ಮಾದರಿ ಎನ್ನಬಹುದಾದ ಡೀಮ್ಡ್ ಅರಣ್ಯ ಅಭಿವೃದ್ಧಿ ಯೋಜನೆ ರೂಪಿಸಿ ಜಾರಿಮಾಡಲು ತಾವು ಮುಂದಾಗಬೇಕು ಎಂದು ಮನವಿ ಮಾಡಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement