ಬೇಡ್ತಿ–ವರದಾ ನದಿಗಳ ಜೋಡಣೆ ಯೋಜನೆ ಕೈಗೆತ್ತಿಕೊಂಡಿಲ್ಲ : ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಗೆ ಸರ್ಕಾರದ ಮಾಹಿತಿ

ಶಿರಸಿ : ಶಿರಸಿ : ಬೇಡ್ತಿ – ವರದಾ ನದಿಗಳ ಜೋಡಣೆ ಯೋಜನೆಯನ್ನು ಸರ್ಕಾರ ಜಾರಿಗೆ ಮುಂದಾಗಿಲ್ಲ. ಡಿಪಿಆರ್‌ಗೆ ಒಪ್ಪಿಗೆ ನೀಡಿಲ್ಲ. ಯೋಜನಾ ವರದಿಯನ್ನು ಕೇಂದ್ರಕ್ಕೆ ಕಳುಹಿಸಿಲ್ಲ, ಕೇಂದ್ರ ಸರ್ಕಾರ ಬೇಡ್ತಿ- ವರದಾ ಯೋಜನೆಗೆ ಅನುದಾನ ನೀಡಿಲ್ಲ ಎಂದು ರಾಜ್ಯ ಸರ್ಕಾರ ಬೇಡ್ತಿ – ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಗೆ ತಿಳಿಸಿದೆ.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಶ್ರೀ ಸೋಂದಾ ಸ್ವರ್ಣವಲ್ಲೀ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನ ನಡೆಸಿ ಜೂನ್ 14 ರಂದು ಮಂಚಿಕೇರಿಯಲ್ಲಿ ಬೃಹತ್ ಜನ ಸಮಾವೇಶ ನಡೆಸಿತ್ತು. ನಂತರ ಬೇಡ್ತಿ ಸಮಿತಿಯ ಪದಾಧಿಕಾರಿಗಳು ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ನೀರಾವರಿ ಇಲಾಖೆಯ ಮುಖ್ಯ ಇಂಜಿನಿಯರ್ ಹಾಗೂ ಜಲ ಅಭಿವೃದ್ಧಿ ಸಂಸ್ಥೆಯವರನ್ನು ಭೇಟಿ ಮಾಡಿದರು. ಈ ವೇಳೆ ನೀರಾವರಿ ಇಲಾಖೆ ಬೇಡ್ತಿ – ವರದಾ ಯೋಜನೆ ಜಾರಿಗೆ ಸರ್ಕಾರ ಮುಂದಾಗಿಲ್ಲ ಎಂಬ ಮಾಹಿತಿ ನೀಡಿದೆ.

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನ ಪ್ರತಿನಿಧಿಗಳು ಹಾಗೂ ಬೇಡ್ತಿ ಸಮಿತಿಯ ಪದಾಧಿಕಾರಿಗಳ ನಿಯೋಗ ಮುಖ್ಯಮಂತ್ರಿಗಳವರನ್ನು ಭೇಟಿ ಮಾಡಲು ದಿನಾಂಕ ನಿಶ್ಚಯವಾಗಿತ್ತು. ನೆರೆ ಹಾವಳಿ, ಭೂಕುಸಿತ, ನಿಸರ್ಗ ವಿಕೋಪ, ಮುಂತಾದ ಕಾರಣಗಳಿಂದ ನಿಯೋಗದ ಭೇಟಿ ರದ್ದಾಯಿತು. ಬೆಂಗಳೂರಿನಲ್ಲೇ ಇದ್ದ ಸಭಾಧ್ಯಕ್ಷ ಕಾಗೇರಿ ಜುಲೈ 8ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರಿಗೆ ಬೇಡ್ತಿ–ವರದಾ ಯೋಜನೆಯ ದುಷ್ಪರಿಣಾಮಗಳು, ಬೇಡ್ತಿ ಸಮಿತಿಯ ಅಹವಾಲುಗಳು, ಬೇಡ್ತಿ ಕಣಿವೆ ಸಂರಕ್ಷಣಾ ಅಭಿಯಾನ, ಇತ್ಯಾದಿ ಕುರಿತು ಮಾಹಿತಿ ನೀಡಿದರು.
ಪಶ್ಚಿಮ ಘಟ್ಟದಲ್ಲಿ ನದೀ ತಿರುವು ಯೋಜನೆಗಳಿಂದ ಆಗಿರುವ ಅರಣ್ಯನಾಶ, ಪರಿಸರ ಹಾನಿ, ಭೂ ಕುಸಿತಗಳು, ರೈತರು ಹಾಗೂ ಕರಾವಳಿಯ ಮೀನುಗಾರರ ಜೀವನದ ಮೇಲೆ ಉಂಟಾಗುವ ದುಷ್ಪರಿಣಾಮಗಳು, ವನ್ಯಜೀವಿ, ಅರಣ್ಯ ಹಾಗೂ ಜೀವವೈವಿಧ್ಯ ಕಾಯಿದೆಗಳ ಉಲ್ಲಂಘನೆ, ಎತ್ತಿನಹೊಳೆ ನೀರಾವರಿ ಯೋಜನೆಯ ವೈಫಲ್ಯ, ಬೇಡ್ತಿ ಕಣಿವೆಯಲ್ಲಿ ನೀರಿನ ಅಭಾವ, ಬೇಡ್ತಿ ಸಮಿತಿಯ ತಜ್ಞರ ವರದಿ, ಮುಂತಾದ ವಿವರಗಳನ್ನು ಕಾಗೇರಿಯವರು ಮುಖ್ಯಮಂತ್ರಿಗಳವರ ಗಮನಕ್ಕೆ ತಂದಿದ್ದಾರೆ ಎಂದು ಬೇಡ್ತಿ – ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ತಿಳಿಸಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ಸಮಿತಿಯ ಗೌರವಾಧ್ಯಕ್ಷರಾದ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಅವರ ಜೊತೆ ಸರ್ಕಾರದ ಈ ಭರವಸೆಗಳ ಬಗ್ಗೆ ಚರ್ಚಿಸಿ ಮುಂದಿನ ಕಾರ್ಯ ಚಟುವಟಿಕೆಗಳನ್ನು ಬೇಡ್ತಿ ಸಮಿತಿ ನಿರ್ಧರಿಸಲಿದೆ. ಮಂಚಿಕೇರಿಯ ಬೇಡ್ತಿ ಸಂರಕ್ಷಣಾ ಸಮಾವೇಶ ಕೈಗೊಂಡ ನಿರ್ಣಯಗಳಂತೆ ಗ್ರಾಮ ಪಂಚಾಯತಗಳು ಹಾಗೂ ಗ್ರ‍್ರಾಮ ಜೀವವೈವಿಧ್ಯ ಸಮಿತಿಗಳು, ರೈತ ಸಹಕಾರಿ ಸಂಘಗಳು, ಸಂಸ್ಥೆಗಳು ಕೈಗೊಂಡಿರುವ ನಿರ್ಣಯಗಳನ್ನು ಬೇಡ್ತಿ ಸಮಿತಿಗೆ ತಲುಪಿಸಬೇಕು ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement