ಕಾರವಾರ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಹೋರಾಟ ನಡೆಸುತ್ತಿರುವುದಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ಜನರ ಬೇಡಿಕೆಯನ್ನು ಈಡೇರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಉತ್ತರ ಕನ್ನಡ ಜಿಲ್ಲೆಯ ಜನರು ನಡೆಸುತ್ತಿರುವ ಹೋರಾಟದಲ್ಲಿ ನಮ್ಮ ಪಕ್ಷವೂ ನಿಲ್ಲುತ್ತದೆ. ಅನೇಕ ವರ್ಷಗಳ ನ್ಯಾಯಯುತ ಈ ಬೇಡಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ಆದ್ಯತೆಯ ಮೇರೆಗೆ ಪರಿಗಣಿಸಿ ಈಡೇರಿಸಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಸುಧಾಕರ ಅವರೇ ಖುದ್ದು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬಹುತೇಕ ಜಿಲ್ಲೆಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲ. ಜನರಿಗೆ ತುರ್ತು ಚಿಕಿತ್ಸೆ ಬೇಕೆಂದರೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮೈಸೂರು, ಬೆಳಗಾವಿಯಂಥ ಕೆಲವಷ್ಟೇ ನಗರಗಳಲ್ಲಿ ಮಾತ್ರ ಲಭ್ಯವಿದೆ. ಜನ ಹೋಗುವುದು ಹೇಗೆ? ಆರೋಗ್ಯ ಸೌಲಭ್ಯದಲ್ಲಿ ಅಸಮಾನತೆ ರಾಜ್ಯಕ್ಕೆ ಶೋಭೆಯಲ್ಲ ಎಂದು ಹೇಳಿದ್ದಾರೆ.
ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಎಲ್ಲ ಸಮುದಾಯ ಕೇಂದ್ರ, ತಾಲೂಕು, ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುತ್ತೇವೆ ಎಂದು ಅಬ್ಬರಿಸಿ ಬೊಬ್ಬಿರಿದ ಸರ್ಕಾರ, ಕೋವಿಡ್ ಇಳಿದ ಮೇಲೆ ತಣ್ಣಗಾಗಿದೆ. ಆಕ್ಸಿಜನ್ ಘಟಕ, ವೆಂಟೆಲೇಟರ್ ಸೇರಿ ಖರೀದಿ ಮಾಡಿದ ವೈದ್ಯ ಪರಿಕರಗಳೆಲ್ಲ ಅನೇಕ ಕಡೆ ಧೂಳು ತಿನ್ನುತ್ತಿವೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಇನ್ನೆಷ್ಟು ಆಂಬುಲೆನ್ಸ್ ದುರಂತಗಳು ಆಗಬೇಕು? ಇನ್ನೆಷ್ಟು ಜನರು ರಸ್ತೆಗಳ ಮೇಲೆಯೇ ಜೀವ ಕಳೆದುಕೊಳ್ಳಬೇಕು? ಶಿರೂರು ಟೋಲ್ ಬಳಿ ಸಂಭವಿಸಿದ ಭೀಕರ ಅಪಘಾತದಿಂದ ರಾಜ್ಯ ಸರ್ಕಾರ ಕಣ್ತೆರೆಯಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಆರೋಗ್ಯ ಸೌಲಭ್ಯ ಕಲ್ಪಿಸುವುದರ ಜತೆಗೆ ಇರುವ ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಸರಕಾರದ ಹೊಣೆ. ಆರೋಗ್ಯ ಎಲ್ಲರ ಹಕ್ಕು. ನಾನು ರೂಪಿಸಿರುವ ಪಂಚರತ್ನ ಕಾರ್ಯಕ್ರಮದಲ್ಲಿ ಆರೋಗ್ಯವೂ ಪ್ರಮುಖ ಕಾರ್ಯಕ್ರಮ. ಜನತೆಗೆ ಅತ್ಯುತ್ತಮ ಆರೋಗ್ಯ ಸೌಲಭ್ಯ ಕೊಡುವುದು ನನ್ನ ಗುರಿ ಎಂದು ಹೇಳಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ