ಪಿಎಸ್‌ಐ ನೇಮಕಾತಿ ಹಗರಣದ ವಾಸನೆ ನನಗೆ ಮೊದಲೇ ಬಂದಿತ್ತು: ಭಾಸ್ಕರ್ ರಾವ್

ಉಡುಪಿ: ಪೊಲೀಸ್ ಇಲಾಖೆಯಲ್ಲಿದ್ದಾಗಲೇ ಪಿಎಸ್‌ಐ ಹಗರಣದ ವಾಸನೆ ಬಂದಿತ್ತು ಎಂದು ಮಾಜಿ ಎಡಿಜಿಪಿ ಹಾಗೂ ಆಪ್‌ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್‌ ಹೇಳಿದರು.
ಮಂಗಳವಾರ ಆಪ್ ಕಚೇರಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಅಮೃತ್‌ ಪೌಲ್‌ ಆಗಾಗ ಮುಖ್ಯಮಂತ್ರಿಗಳ ಮನೆಯ ಬಳಿ ಸುಳಿದಾಡುತ್ತಿರುವುದನ್ನು ಗಮನಿಸಿ ಈ ಬಗ್ಗೆ ಪ್ರಶ್ನಿಸಿದ್ದೆ ಎಂದು ಅವರು ಹೇಳಿದರು.
ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಒಂದು ವರ್ಷ ಮುಗಿಯುವಷ್ಟರಲ್ಲಿ ಅಮೃತ್ ಪೌಲ್ ಮುಂದಿನ ಕಮಿಷನರ್‌ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. 1995ರ ಐಪಿಎಸ್‌ ಬ್ಯಾಚ್‌ನ ಅಧಿಕಾರಿಯಾಗಿರುವ ಅಮೃತ್ ಪೌಲ್‌ ಹಿರಿಯ ಅಧಿಕಾರಿಗಳನ್ನೆಲ್ಲ ಹಿಂದಿಕ್ಕಿ ಅವರು ಕಮಿಷನರ್ ಹುದ್ದೆಗೇರಿದ ಬಗ್ಗೆ ಅಚ್ಚರಿಯಾಗಿತ್ತು. ನಂತರ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಮೃತ್ ಪೌಲ್ ಜೈಲು ಸೇರಿದಾಗ ಅನುಮಾನ ಸ್ಪಷ್ಟವಾಯಿತು ಎಂದು ಭಾಸ್ಕರ್ ರಾವ್ ಹೇಳಿದರು.

ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸಿ ಹೊಸದಾಗಿ ಪರೀಕ್ಷೆ ನಡೆಯಬೇಕು. ಪ್ರಕರಣದಲ್ಲಿ ಎಸಿಬಿ, ಸಿಐಡಿ ತನಿಖೆ ನಡೆಯುವುದರಲ್ಲಿ ಅರ್ಥವಿಲ್ಲ. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಯಬೇಕು ಎಂದರು.
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಕೆ.ಎಸ್‌.ಈಶ್ವರಪ್ಪ ವಿರುದ್ಧ ‘ಬಿ’ ರಿಪೋರ್ಟ್‌ ಸಲ್ಲಿಸಿರುವುದು ತನಿಖಾ ಲೋಪ ಎಂದು ಹೇಳಿದರು. ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರೆ 306 ಸೆಕ್ಷನ್ ಅಡಿ ಸಾಮಾನ್ಯ ಆರೋಪಿಗಳನ್ನು ಬಂಧಿಸುವ ಪೊಲೀಸ್ ಇಲಾಖೆ, ಈಶ್ವರಪ್ಪ ಅವರನ್ನು ಬಂಧಿಸದಿರಲು ಕಾರಣ ಏನು ಎಂದು ಪ್ರಶ್ನಿಸಿದರು. ಒಂದುವೇಳೆ ಈಶ್ವರಪ್ಪ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದರೆ ಆಮ್‌ ಆದ್ಮಿ ಪಾರ್ಟಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಂದು ಹೇಳಿದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement