ದಿವ್ಯಾ ಹಾಗರಗಿ ಸಲ್ಲಿಸಿದ್ದ ಪಿಐಎಲ್ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ದಿವ್ಯಾ ಹಾಗರಗಿ ಪ್ರಮುಖ ಆರೋಪಿಯಾಗಿದ್ದಾರೆ. ಅವರ ಮನವಿಯನ್ನು ನಾವೇಕೆ ಪರಿಗಣಿಸಬೇಕು” ಎಂದು ಹಾಗರಗಿ ಪರ ವಕೀಲರನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡ ಕರ್ನಾಟಕ ಹೈಕೋರ್ಟ್‌ ಆಕೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸಿದೆ.
ಕರ್ನಾಟಕ ನರ್ಸಿಂಗ್‌ ಮತ್ತು ಪ್ಯಾರಾಮೆಡಿಕಲ್‌ ವಿಜ್ಞಾನ ಶಿಕ್ಷಣ (ನಿಯಂತ್ರಣ) ಪ್ರಾಧಿಕಾರಕ್ಕೆ ವಿಶೇಷ ಅಧಿಕಾರಿ ನೇಮಕಾತಿ ಪ್ರಶ್ನಿಸಿ ದಿವ್ಯಾ ಹಾಗರಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜೀತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರಳು ತಾನು ಕರ್ನಾಟಕ ನರ್ಸಿಂಗ್‌ ಕೌನ್ಸಿಲ್‌ನ ನಾಮನಿರ್ದೇಶಿತ ಸದಸ್ಯೆಯಾಗಿದ್ದು, ನರ್ಸ್‌ಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ನಡುವೆ ಅರ್ಜಿದಾರಳು ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಬಂಧಿತರಾಗಿದ್ದಾರೆ. ಸೇವೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ, ಅರ್ಜಿ ವಜಾ ಮಾಡಲಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

ಹಾಗರಗಿ ವಕೀಲ ಅರ್ನವ್‌ ಬಾಗಲವಾಡಿ ಅವರು “ಅರ್ಜಿದಾರಳನ್ನು ಏತಕ್ಕಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಅಫಿಡವಿಟ್‌ ಸಿದ್ಧವಾಗಿದ್ದು, ಅದನ್ನು ಸಲ್ಲಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠವು “ದಿವ್ಯಾ ಹಾಗರಗಿ ಪಿಎಸ್‌ಐ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿತರಾಗಿದ್ದಾರೆ. ನ್ಯಾಯಾಲಯದ ಅಧಿಕಾರಿಯಾಗಿ ನಿಮ್ಮ ಅರ್ಜಿದಾರರ ಬಗ್ಗೆ ನೀವು ಏನು ಹೇಳಬಯಸುತ್ತೀರಿ” ಎಂದು ವಕೀಲರನ್ನು ಪ್ರಶ್ನಿಸಿತು.
ದಿವ್ಯಾ ಹಾಗರಗಿ ಹಗರಣದಲ್ಲಿ ಸಿಲುಕಿದ್ದಾರೆ. ಅವರ ಮನವಿಯನ್ನು ನಾವೇಕೆ ಪರಿಗಣಿಸಬೇಕು? ಮನವಿಯ ಬಗ್ಗೆ ನಾವು ಗಮನಹರಿಸುತ್ತೇವೆ. ಅ ಸೇವೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ” ಎಂದು ಪೀಠ ಹೇಳಿತು.

ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಒಡೆತನದ ಕಲಬುರ್ಗಿಯ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯನ್ನು ಪಿಎಸ್‌ಐ ಪರೀಕ್ಷಾ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿತ್ತು. ಇಲ್ಲಿ ಹಣ ಪಡೆದು ಅಭ್ಯರ್ಥಿಗಳ ಓಎಂಆರ್‌ ಶೀಟುಗಳನ್ನು ದಿವ್ಯಾ ಅವರು ತಮ್ಮ ಶಾಲೆಯ ಶಿಕ್ಷಕಿಯರ ಮೂಲಕ ತಿರುಚಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಕಲಬುರ್ಗಿಯ ಚೌಕ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದರು. ವಿಚಾರಣಾಧೀನ ನ್ಯಾಯಾಲಯವು ತಲೆಮರೆಸಿಕೊಂಡಿರುವ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿ, ಬಂಧನ ವಾರೆಂಟ್‌ ಹೊರಡಿಸಿದ್ದರಿಂದ ಮಹಾರಾಷ್ಟ್ರ ಪುಣೆಯಲ್ಲಿ ಏಪ್ರಿಲ್‌ 29ರಂದು ಪೊಲೀಸರಿಗೆ ದಿವ್ಯಾ ಹಾಗರಗಿ ಸೆರೆ ಸಿಕ್ಕಿದ್ದರು. ಪ್ರಕರಣದಲ್ಲಿ ದಿವ್ಯಾ ಹಾಗರಗಿ 18ನೇ ಆರೋಪಿಯಾಗಿದ್ದು, ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಪ್ರಕರಣದ ಸಂಬಂಧ ಸಿಐಡಿಯು ವಿಚಾರಣಾಧೀನ ನ್ಯಾಯಾಲಯಕ್ಕೆ 2 ಸಾವಿರಕ್ಕೂ ಹೆಚ್ಚು ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement