ವಜಾಗೊಂಡ ಪಶ್ಚಿಮ ಬಂಗಾಳ ಸಚಿವನ ಮೇಲೆ ಚಪ್ಪಲಿ ಎಸೆದ ಮಹಿಳೆ: ಆತ ಬಡವರ ಹಣ ಲಪಟಾಯಿಸಿದ ಎಂದು ಕೋಪ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಸಚಿವ ಪಾರ್ಥ ಚಟರ್ಜಿ ಅವರನ್ನು ಇಂದು, ಮಂಗಳವಾರ ಕೋಲ್ಕತ್ತಾ ಬಳಿಯ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗ ಮಹಿಳೆಯೊಬ್ಬರು ಅವರ ಮೇಲೆ ಚಪ್ಪಲಿ ಎಸೆದ ಘಟನೆ ನಡೆದಿದೆ.
ತನ್ನ ಹೆಸರು ಸುಭ್ರಾ ಘದುಯಿ ಮತ್ತು ಅವರು ದಕ್ಷಿಣ 24 ಪರಗಣ ಜಿಲ್ಲೆಯ ಅಮತಾಲಾ ನಿವಾಸಿ ಎಂದು ಮಹಿಳೆ ಪತ್ರಕರ್ತರಿಗೆ ತಿಳಿಸಿದರು.
ಯಾಕೆ ಚಪ್ಪಲಿ ಎಸೆದಿದ್ದೀರಿ ಎಂದು ಪ್ರಶ್ನಿಸಿದ ಮಾಧ್ಯಮದವರಿಗೆ ಉತ್ತರಿಸಿದ ಮಹಿಳೆ “ನಿಮಗೆ ಗೊತ್ತಿಲ್ಲವೇ?, ಆತ ಎಷ್ಟೋ ಬಡವರ ಹಣವನ್ನು ಲಪಟಾಯಿಸಿದ್ದಾನೆ, ಫ್ಲಾಟ್‌ಗಳನ್ನು ಖರೀದಿಸಿದ್ದಾನೆ, ಮತ್ತು ನೀವು ನನ್ನನ್ನು ಏಕೆ ಕೇಳುತ್ತಿದ್ದೀರಿ, ಅವನನ್ನು ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಒಯ್ಯಲಾಗುತ್ತಿದೆ. ಆತನ ಕುತ್ತಿಗೆಗೆ ಹಗ್ಗ ಹಾಕಿ ಎಳೆಯಬೇಕು, ಅವನ ತಲೆಗೆ ಚಪ್ಪಲಿ ಹೋಗಿ ಬಡಿದರೆ ನಾನು ಹೆಚ್ಚು ಸಂತೋಷಪಡುತ್ತೇನೆ ಎಂದು ಮಹಿಳೆ ಹೇಳಿದ್ದಾರೆ.
ಎಷ್ಟೋ ಜನರಿಗೆ ಊಟವಿಲ್ಲ, ಕೆಲಸ ಕೊಡಿಸುವ ಭರವಸೆ ನೀಡಿ ಹಣ ತೆಗೆದುಕೊಂಡರು. ನಂತರ ಖುಷಿಪಟ್ಟು, ನಗದನ್ನು ಪೇರಿಸಲು ಫ್ಲಾಟ್‌ಗಳನ್ನು ಖರೀದಿಸಿದರು. ಇದು ನನ್ನ ಕೋಪ ಮಾತ್ರವಲ್ಲ, ಪಶ್ಚಿಮ ಬಂಗಾಳದ ಲಕ್ಷ ಲಕ್ಷ ಜನರ ಕೋಪ ಎಂದು ಆ ಮಹಿಳೆ ಹೇಳಿದರು.
ಚಪ್ಪಲಿ ಎಸೆದ ನಂತರ ತೃಣಮೂಲ ಕಾಂಗ್ರೆಸ್ ನಾಯಕನನ್ನು ತರಾತುರಿಯಲ್ಲಿ ಸುತ್ತುವರಿದ ಪೊಲೀಸರು ಸುರಕ್ಷಿತವಾಗಿ ಸ್ಥಳಾಂತರಿಸಿದರು.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

ಚಟರ್ಜಿ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಸುತ್ತ ಬಿಗಿ ಭದ್ರತೆಯ ನಡುವೆಯೂ ಈ ಘಟನೆ ನಡೆದಿದೆ, ಅರ್ಪಿತಾ ಮುಖರ್ಜಿಗೆ ಸೇರಿದ ಫ್ಲಾಟ್‌ಗಳಿಂದ ಅಪಾರ ಪ್ರಮಾಣದ ನಗದು ಮತ್ತು ಕೆಜಿಗಟ್ಟಲೆ ಚಿನ್ನವನ್ನು ವಶಪಡಿಸಿಕೊಂಡ ನಂತರ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರಲ್ಲಿ ಒಬ್ಬರಾಗಿದ್ದ ಚಟರ್ಜಿ ಅವರು ರಾಜ್ಯ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಇತ್ತೀಚೆಗೆ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ. ಜುಲೈ 23 ರಂದು ಜಾರಿ ನಿರ್ದೇಶನಾಲಯ (ಇ.ಡಿ) ಪಾರ್ಥ ಚಟರ್ಜಿ ಅವರನ್ನು ಬಂಧಿಸಿತ್ತು. ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಫ್ಲಾಟ್‌ಗಳಿಂದ ಸುಮಾರು 50 ಕೋಟಿ ನಗದು ಮತ್ತು ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿದೆ.
ಪಾರ್ಥ ಚಟರ್ಜಿ ನನ್ನ ಮತ್ತು ಇನ್ನೊಬ್ಬ ಮಹಿಳೆಯ ಮನೆಯನ್ನು ಮಿನಿ ಬ್ಯಾಂಕ್ ಆಗಿ ಬಳಸಿಕೊಂಡಿದ್ದಾರೆ ಎಂದು ಮುಖರ್ಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಚಟರ್ಜಿ ಇದು ತನ್ನ ಹಣವಲ್ಲ, ಸರಿಯಾದ ಸಮಯದಲ್ಲಿ ಸತ್ಯ ಹೊರಬರಲಿದೆ ಎಂದು ಹೇಳಿದ್ದರು.
ಕೋಲ್ಕತ್ತಾ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಸಿಬಿಐ, ಬಂಗಾಳದ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳ ಬಗ್ಗೆ ಪರಿಶೀಲಿಸುತ್ತಿದೆ. ಜಾರಿ ನಿರ್ದೇಶನಾಲಯ ಅಕ್ರಮ ಹಗರಣದ ಹಣದ ಜಾಡು ಹಿಡಿಯುತ್ತಿದೆ.

ಪ್ರಮುಖ ಸುದ್ದಿ :-   ಉತ್ತಮ ಪ್ರತಿಕ್ರಿಯೆ, ಜನರು ದಾಖಲೆ ಸಂಖ್ಯೆಯಲ್ಲಿ ಎನ್‌ಡಿಎಗೆ ಮತ ಹಾಕಿದ್ದಾರೆ : ಲೋಕಸಭೆ ಚುನಾವಣೆ 1ನೇ ಹಂತದ ಮತದಾನದ ಬಗ್ಗೆ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement