ಬೆಂಗಳೂರು: ಎಸಿಬಿ ಮುಂದೆ ವಿಚಾರಣೆಗೆ ಹಾಜರಾದ ಕಾಂಗ್ರೆಸ್‌ ಶಾಸಕ ಜಮೀರ್ ಅಹಮದ್

ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್‌ ಶಾಸಕ ಜಮೀರ್ ಅಹಮದ್ ಖಾನ್ ಇಂದು, ಶನಿವಾರ ಎಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
10 ದಿನದ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಇಂದು ತನಿಖಾಧಿಕಾರಿ ಎಸಿಬಿ ಡಿವೈಎಸ್​ಪಿ ರವಿಶಂಕರ್ ಎದುರು ವಿಚಾರಣೆಗೆ ಹಾಜರಾಗಿದ್ದಾರೆ‌.
ಜುಲೈ 5 ರಂದು ಶಾಸಕ ಜಮೀರ್ ಅಹಮದ್ ಖಾನ್ ಅವರ ಮನೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ, ಫ್ಲ್ಯಾಟ್​ಗಳ ಮೇಲೆ ಎಸಿಬಿ ದಾಳಿ ನಡೆಸಿತ್ತು. ದಾಳಿ ವೇಳೆ ಅಕ್ರಮ ಆಸ್ತಿ ಗಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಆಸ್ತಿಗೆ ಸಂಬಂಧಿಸಿದ ಆದಾಯದ ಮೂಲ ದಾಖಲೆ ತರುವಂತೆ ಸೂಚನೆ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ್ದ ಶಾಸಕ ಜಮೀರ್ ಅಹಮದ್​ಗೆ ಆಗಸ್ಟ್ 6 ರಂದು ಕಚೇರಿಗೆ ಹಾಜರಾಗಲು ಎಸಿಬಿ ಸೂಚಿಸಿತ್ತು.

ಅಧಿಕೃತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆರೋಪ ಜಮೀರ್ ಅಹ್ಮದ್‌ ಖಾನ್​ ಮೇಲಿದೆ. ಐಎಂಐ ಬಹುಕೋಟಿ ವಂಚನೆ ಪ್ರಕರಣದ ತನಿಖೆ ವೇಳೆ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ವರದಿ ಆಧರಿಸಿ ಜಮೀರ್ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ, ಈ ಸಂಬಂಧ ಜುಲೈ 5 ರಂದು ಅವರ ಮನೆ, ಕಚೇರಿ ಸೇರಿದಂತೆ 5 ಕಡೆ ದಾಳಿ ನಡೆಸಿ ಶೋಧ ಕೈಗೊಂಡಿತ್ತು.
ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣ ಸಮೀಪ ಬಂಬೂ ಬಜಾರ್‌ನಲ್ಲಿರುವ ಜಮೀರ್‌ ನಿವಾಸ, ಸದಾಶಿವ ನಗರದಲ್ಲಿರುವ ಅತಿಥಿ ಗೃಹ, ಕಲಾಸಿಪಾಳ್ಯದಲ್ಲಿನ ಅವರ ಒಡೆತನದ ನ್ಯಾಷನಲ್‌ ಟ್ರಾವೆಲ್ಸ್‌ ಕಂಪನಿಯ ಕಚೇರಿಸೇರಿ ಐದು ಸ್ಥಳಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಕಾಲೇಜ್‌ ಕ್ಯಾಂಪಸ್‌ ನಲ್ಲೇ ಚಾಕುವಿನಿಂದ ಇರಿದು ಕಾರ್ಪೊರೇಟರ್ ಪುತ್ರಿಯ ಹತ್ಯೆ ; ಯುವಕನ ಬಂಧನ

ಜಮೀರ್‌ ಅಹ್ಮದ್‌ ಖಾನ್‌ ಹೆಸರು ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಕೇಳಿಬಂದಿತ್ತು. ಐಎಂಎ ಪ್ರಕರಣದ ರೂವಾರಿ ಮನ್ಸೂರ್‌ ಅಲಿಖಾನ್‌ ಜತೆ ಜಮೀರ್‌ ಅಹ್ಮದ್‌ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಇತ್ತು. ಇದಕ್ಕೆ ಪೂರಕವಾಗಿ, ಜಮೀರ್‌ ಅಹ್ಮದ್‌ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯ ನಿವೇಶನ ಮಾರಾಟ ಮಾಡಿದ್ದರು. ವಿದೇಶದಲ್ಲಿ ಕ್ಯಾಸಿನೋ ವ್ಯವಹಾರ ನಡೆಸಿದ್ದರೆಂಬ ಆರೋಪ ಇತ್ತು. ಇವುಗಳ ದಾಖಲೆ ಪಡೆದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಕಳೆದ ವರ್ಷ ಆಗಸ್ಟ್‌ನಲ್ಲಿ ಜಮೀರ್‌ ಅಹ್ಮದ್‌ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement