ಸಿಇಟಿಗೆ ಪಿಯು ಅಂಕ ವಿವಾದ; ಮುಂದಿನ ವಿಚಾರಣೆ ವರೆಗೆ ಕೌನ್ಸೆಲಿಂಗ್ ಆರಂಭಿಸುವುದಿಲ್ಲ ಎಂದು ಹೈಕೋರ್ಟಿಗೆ ತಿಳಿಸಿದ ಸರ್ಕಾರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಸಂಬಂಧಿಸಿದ ಕೌನ್ಸೆಲಿಂಗ್‌ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಈಗ ದಾಖಲೆ ಪರಿಶೀಲನೆ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಮುಂದಿನ ವಿಚಾರಣೆಯ ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವುದಿಲ್ಲ” ಎಂದು ರಾಜ್ಯ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು 2022ನೇ ಸಾಲಿನಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸದ ಕೆಇಎ ಕ್ರಮ ಪ್ರಶ್ನಿಸಿ ಚಿಕ್ಕಮಗಳೂರಿನ ಆರ್‌. ಈಶ್ವರ ಸೇರಿದಂತೆ ಹಲವರು ಪ್ರತ್ಯೇಕವಾಗಿ ಸಲ್ಲಿಸಿರುವ ನಾಲ್ಕು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ವರದಿ ಪ್ರಕಾರ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಡಿ ಆರ್‌ ರವಿಶಂಕರ್‌ ಅವರು “ನಿಯಮ ಉಲ್ಲಂಘಿಸಿ ಆದೇಶ ಮಾಡುವುದಲ್ಲದೇ ಅದನ್ನು ಜಾರಿಗೊಳಿಸಲು ಕೆಇಎ ಮುಂದಾಗಿದೆ. 2021-22ನೇ ಶೈಕ್ಷಣಿಕ ವರ್ಷಕ್ಕೆ ಹಿಂದಿನ ವರ್ಷದ ಪಿಯು ಅಂಕ ಅನ್ವಯಿಸುವುದಿಲ್ಲ ಎಂದು ಹೇಳಲಾಗಿದೆ. ಇಲ್ಲಿ ಕಾಯಿದೆ ತಿದ್ದುಪಡಿ ಮಾಡದೆ ಆದೇಶ ಮುಂದುವರಿಸಲು ಕೆಇಎ ಮುಂದಾಗಿದೆ. ಇದಕ್ಕೆ ಬದಲಾಗಿ 2020-21, 2021-22ನೇ ಸಾಲಿನಲ್ಲಿ ವಿದ್ಯಾರ್ಥಿಗಳು ಸಿಇಟಿಯಲ್ಲಿ ಪಡೆದಿರುವ ಅಂಕಗಳನ್ನು ಆಧರಿಸಿ ರ್ಯಾಂಕ್‌ ಪ್ರಕಟಿಸಬೇಕು. ಇದರಿಂದ ಯಾರಿಗೂ ಸಮಸ್ಯೆಯಾಗುವುದಿಲ್ಲ ಎಂದು ಕೋರಿದರು.
ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು “ನೈಜ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭವಾಗಿಲ್ಲ. ಈಗ ದಾಖಲೆ ಪರಿಶೀಲನೆ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ. ಮುಂದಿನ ವಿಚಾರಣೆಯವರೆಗೆ ಕೆಇಎ ವಾಸ್ತವಿಕ ಕೌನ್ಸೆಲಿಂಗ್‌ ಪ್ರಕ್ರಿಯೆ ಆರಂಭಿಸುವುದಿಲ್ಲ” ಎಂದು ಪೀಠಕ್ಕೆ ತಿಳಿಸಿದರು.
ಇದನ್ನು ಪರಿಗಣಿಸಿದ ಪೀಠವು ಮುಂದಿನ ವಿಚಾರಣೆಯ ಒಳಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬೇಕು” ಎಂದು ಆದೇಶದಲ್ಲಿ ಹೇಳಿದೆ. ವಿಚಾರಣೆಯನ್ನು ಆಗಸ್ಟ್‌ 18ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement