ಲಾಲು ಮತ್ತೊಬ್ಬ ಪುತ್ರ ತೇಜ್ ಪ್ರತಾಪ್ ಸೇರಿ ಬಿಹಾರದ ನಿತೀಶ ಸಂಪುಟದ 31 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ್ ಅವರು ಇಂದು, ಮಂಗಳವಾರ ತಮ್ಮ ಸಂಪುಟವನ್ನು ವಿಸ್ತರಿಸಿದ್ದು, ಮೈತ್ರಿಕೂಟದ ಪಾಲುದಾರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ)ಗೆ ಅತಿ ಹೆಚ್ಚು ಸಚಿವ ಸ್ಥಾನಗಳು ದೊರಕಿದೆ. ನೂತನ ಸಚಿವರಿಗೆ ರಾಜ್ಯಪಾಲ ಫಾಗು ಚೌಹಾಣ್ ಪ್ರಮಾಣ ವಚನ ಬೋಧಿಸಿದರು.
ಬಿಹಾರ ಸಂಪುಟಕ್ಕೆ ಒಟ್ಟು 31 ಸಚಿವರು ಸೇರ್ಪಡೆಗೊಂಡಿದ್ದು, ಆರ್‌ಜೆಡಿಗೆ 16 ಸಚಿವ ಸ್ಥಾನಗಳು ದೊರೆತಿದೆ. ನಂತರದ ಸ್ಥಾನದಲ್ಲಿ ಜನತಾ ದಳ (ಯುನೈಟೆಡ್) 11 ಸಚಿವ ಸ್ಥಾನಗಳನ್ನು ಪಡೆದುಕೊಂಡಿದೆ.
ನಿತೀಶಕುಮಾರ್ ಅವರು ಗೃಹ ಇಲಾಖೆಯನ್ನು ಉಳಿಸಿಕೊಂಡಿದ್ದರೆ, ಡಿಸಿಎಂ ತೇಜಸ್ವಿ ಯಾದವ್ ಅವರು ಆರೋಗ್ಯ, ರಸ್ತೆ ನಿರ್ಮಾಣ, ನಗರಾಭಿವೃದ್ಧಿ, ವಸತಿ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಪ್ರಮುಖ ಖಾತೆಗಳನ್ನು ಪಡೆದರು. ತೇಜಸ್ವಿ ಯಾದವ್ ಅವರ ಸಹೋದರ ತೇಜ್ ಪ್ರತಾಪ್ ಯಾದವ್ ಬಿಹಾರದ ನೂತನ ಪರಿಸರ ಸಚಿವರಾಗಿದ್ದಾರೆ.

ಮೊಹಮ್ಮದ್ ಜಮಾ ಖಾನ್, ಜಯಂತ್ ರಾಜ್, ಶೀಲಾ ಕುಮಾರಿ, ಸುನಿಲ್ ಕುಮಾರ್, ಸಂಜಯ್ ಝಾ, ಮದನ್ ಸಾಹ್ನಿ, ಶ್ರವಣ್ ಕುಮಾರ್, ಅಶೋಕ್ ಚೌಧರಿ, ಲೇಶಿ ಸಿಂಗ್, ವಿಜಯ್ ಕುಮಾರ್ ಚೌಧರಿ ಮತ್ತು ಬಿಜೇಂದ್ರ ಯಾದವ್ ಸೇರಿದಂತೆ ಜೆಡಿಯು ತನ್ನ ಹೆಚ್ಚಿನ ಮಂತ್ರಿಗಳನ್ನು ಉಳಿಸಿಕೊಂಡಿದೆ.
ಆರ್‌ಜೆಡಿಯಿಂದ ತೇಜ್ ಪ್ರತಾಪ್ ಯಾದವ್, ಅಲೋಕ್ ಮೆಹ್ತಾ, ಸುರೇಂದ್ರ ಪ್ರಸಾದ್ ಯಾದವ್ ಮತ್ತು ರಮಾನಂದ್ ಯಾದವ್, ಕುಮಾರ್ ಸರ್ವಜೀತ್, ಲಲಿತ್ ಯಾದವ್, ಸಮೀರ್ ಕುಮಾರ್ ಮಹಾಸೇತ್, ಚಂದ್ರಶೇಖರ್, ಜಿತೇಂದ್ರ ಕುಮಾರ್ ರೈ, ಅನಿತಾ ದೇವಿ ಮತ್ತು ಸುಧಾಕರ್ ಸಿಂಗ್, ಇಸ್ರೇಲ್ ಮನ್ಸೂರಿ, ಸುರೇಂದ್ರ ರಾಮ್, ಕಾರ್ತಿಕೇಯ ಸಿಂಗ್, ಶಾನವಾಜ್ ಆಲಂ , ಶಮೀಮ್ ಅಹಮದ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

ಇಬ್ಬರು ಕಾಂಗ್ರೆಸ್ ಶಾಸಕರಾದ ಅಫಾಕ್ ಆಲಂ ಮತ್ತು ಮುರಾರಿ ಲಾಲ್ ಗೌತಮ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು, ಆದರೆ ಸಂತೋಷ್ ಸುಮನ್ ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾದಿಂದ ಪ್ರಮಾಣ ವಚನ ಸ್ವೀಕರಿಸಿದರು. ಏಕೈಕ ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ಕೂಡ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬಿಹಾರ ಕ್ಯಾಬಿನೆಟ್ ಮುಖ್ಯಮಂತ್ರಿ ಸೇರಿದಂತೆ 36 ಮಂತ್ರಿಗಳನ್ನು ಹೊಂದಬಹುದು. ಭವಿಷ್ಯದ ಸಂಪುಟ ವಿಸ್ತರಣೆಗಾಗಿ ಕೆಲವು ಸಚಿವ ಸ್ಥಾನಗಳನ್ನು ಖಾಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿತೀಶ್ ಕುಮಾರ್ ಅವರು ಬಿಜೆಪಿಯಿಂದ ಬೇರ್ಪಟ್ಟು ಈ ತಿಂಗಳ ಆರಂಭದಲ್ಲಿ ಆರ್‌ಜೆಡಿ ಮತ್ತು ಇತರ ಪಕ್ಷಗಳೊಂದಿಗೆ ಸರ್ಕಾರ ರಚಿಸಿದ್ದರು. ಆಗಸ್ಟ್ 10 ರಂದು ಅವರು ಮತ್ತು ತೇಜಸ್ವಿ ಯಾದವ್ ಪ್ರಮಾಣ ವಚನ ಸ್ವೀಕರಿಸಿದರು.
ಬಿಹಾರದ ಮಹಾಮೈತ್ರಿಕೂಟವು 163 ರ ಒಟ್ಟು ಬಲವನ್ನು ಹೊಂದಿದೆ. ಸ್ವತಂತ್ರ ಶಾಸಕ ಸುಮಿತ್ ಕುಮಾರ್ ಸಿಂಗ್ ನಿತೀಶ್ ಕುಮಾರ್ ಅವರಿಗೆ ಬೆಂಬಲ ನೀಡಿದ ನಂತರ ಅದರ ಪರಿಣಾಮಕಾರಿ ಬಲವು 164 ಕ್ಕೆ ಏರಿತು.
ಹೊಸ ಸರ್ಕಾರ ಆಗಸ್ಟ್ 24 ರಂದು ಬಿಹಾರ ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ಇವರು ಭಾರತದ ಅತ್ಯಂತ ಶ್ರೀಮಂತ ಅಭ್ಯರ್ಥಿ : ತೆಲುಗು ದೇಶಂ ಪಕ್ಷದ ಇವರ ಆಸ್ತಿ 5,785 ಕೋಟಿ ರೂಪಾಯಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement