ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ: ಎಸ್‌ಐಟಿ ಬಿ ರಿಪೋರ್ಟ್‌ ವಜಾ ಕೋರಿ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ

ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್ ನೀಡಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ವರದಿಯನ್ನು ವಜಾ ಮಾಡಬೇಕು ಎಂದು ಕೋರಿ ಸಂತೋಷ್ ಪಾಟೀಲ ಕುಟುಂಬದವರು ವಿಶೇಷ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಪ್ರಕರಣದ ಸಂಬಂಧ ಎಸ್‌ಐಟಿ ಅಧಿಕಾರಿಗಳು ಸಲ್ಲಿಸಿರುವ ಬಿ ರಿಪೋರ್ಟ್‌ ವಿರೋಧಿಸಿ, ಮೃತ ಸಂತೋಷ್ ಪಾಟೀಲ ಸಹೋದರ ಪ್ರಶಾಂತ್ ಪಾಟೀಲ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರತಿರೋಧ ಅರ್ಜಿ (ಪ್ರೊಟೆಸ್ಟ್ ಪಿಟಿಷನ್) ಸಲ್ಲಿಸಿದ್ದು, ಬುಧವಾರ ನ್ಯಾಯಾಲಯದ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ಸಂತೋಷ ಪಾಟೀಲ ನಡೆಸಿರುವ ಕಾಮಗಾರಿಗಳು ಹಾಗೂ ಆ ಸಂಬಂಧ ಈಶ್ವರಪ್ಪ ಅವರೊಂದಿಗೆ ನಡೆಸಿರುವ ಮಾತುಕತೆಗೆ ಸಂಬಂಧಿಸಿದಂತೆ ಹಲವು ದಾಖಲೆಗಳಿವೆ. ಸಂತೋಷ ಆತ್ಮಹತ್ಯೆಗೆ ಈಶ್ವರಪ್ಪ ಅವರೇ ಕಾರಣ ಎಂಬುದನ್ನು ಸಾಬೀತುಪಡಿಸುವ ಹಲವು ಸಾಕ್ಷ್ಯಗಳು ಲಭ್ಯವಿದ್ದರೂ ಸಾಕ್ಷ್ಯಾಧಾರ ಕೊರತೆಯ ಕಾರಣ ನೀಡಿ ಪೊಲೀಸರು ಬಿ-ವರದಿ ಸಲ್ಲಿಸಿದ್ದಾರೆ. ಸಂತೋಷ್ ಆತ್ಮಹತ್ಯೆಯ ಹಿಂದೆ ಹಲವು ಪ್ರಭಾವಿಗಳ ಕೈವಾಡವಿದೆ. ಎಸ್‌ಐಟಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ, ರಾಜಕೀಯ ಪ್ರಭಾವಕ್ಕೆ ಒಳಗಾಗಿ ಈಶ್ವರಪ್ಪ ಅವರಿಗೆ ಕ್ಲೀನ್‌ಚಿಟ್ ನೀಡಿದ್ದಾರೆ. ಆದ್ದರಿಂದ, ಎಸ್‌ಐಟಿ ಸಲ್ಲಿಸಿರುವ ಬಿ-ರಿಪೋರ್ಟ್ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ: ಮಗನಿಗೆ ಯಾವ ಶಿಕ್ಷೆ ಕೊಟ್ರೂ ಸ್ವಾಗತಿಸ್ತೇನೆ ಎಂದ ಕೊಲೆ ಆರೋಪಿ ಫಯಾಜ್‌ ತಂದೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದ ಕೆ ಎಸ್ ಈಶ್ವರಪ್ಪ ಮತ್ತು ಸಹಚರರು ಕಾಮಗಾರಿ ಬಿಲ್ ಪಾವತಿಗೆ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆ ಎಂದು ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ಗುತ್ತಿಗೆದಾರ ಸಂತೋಷ ಅವರು, ಏಪ್ರಿಲ್‌ 12ರಂದು ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಈಶ್ವರಪ್ಪ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಲಾಡ್ಜ್‌ನ ಸಿಸಿ ಕ್ಯಾಮರಾ ದೃಶ್ಯಾವಳಿ, ಆಡಿಯೋ, ಮೊಬೈಲ್ ಸಂದೇಶ, ಬ್ಯಾಂಕ್ ದಾಖಲೆ, ಗುತ್ತಿಗೆ ವಿವರ, ಕುಟುಂಬಸ್ಥರು, ಸ್ನೇಹಿತರ ಹೇಳಿಕೆ ಸಹಿತ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ 1,800 ಪುಟಗಳ ಅಂತಿಮ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement