ಕೆಲ ಸಚಿವರು, ಶಾಸಕರಿಂದ ಕಮಿಷನ್ : ದಂಧೆ ಗುತ್ತಿಗೆದಾರರ ಆರೋಪ

ಬೆಂಗಳೂರು: ರಾಜ್ಯದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಶೇ. ೪೦ರಷ್ಟು ಕಮಿಷನ್ ವಿಚಾರದ ವಿರುದ್ಧ ರಾಜ್ಯಗುತ್ತಿಗೆದಾರರ ಸಂಘ ಸಮರ ಸಾರಿದೆ. ಭ್ರಷ್ಟಾಚಾರದಲ್ಲಿ ರಾಜ್ಯ ನಂ. ೧ ಎಂದು ಗುಡುಗಿದ್ದಾರೆ. ಶೇ. ೪೦ರಷ್ಟು ಕಮಿಷನ್ ಬಗ್ಗೆ ನ್ಯಾಯಾಂಗ ತನಿಖೆಗೆ ಒಪ್ಪಿಸಿದರೆ ಸಂಪೂರ್ಣ ದಾಖಲೆಯನ್ನು ಬಹಿರಂಗಪಡಿಸುವುದಾಗಿ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ್ದಾರೆ.
ಕೋಲಾರ ಜಲ್ಲಾ ಉಸ್ತುವಾರಿ ಸಚಿವ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿರುವ ಕೆಂಪಣ್ಣ, ಹಣ ತೆಗೆದುಕೊಂಡು ಬನ್ನಿ ಕೆಲಸ ಮಾಡಿಕೊಡುವುದಾಗಿ ಹೇಳುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರದ ಕಾಮಗಾರಿಗಳಿಗಾಗಿ ಗುತ್ತಿಗೆದಾರರಿಂದ ಶೇ.೪೦ರಷ್ಟು ಸಚಿವರು ಕಮಿಷನ್ ಕೇಳುತ್ತಾರೆ ಎಂದು ಆರೋಪ ಮಾಡಿದ್ದಕ್ಕಾಗಿ ಗುತ್ತಿಗೆದಾರರಿಗೆ ಕೊಲೆ ಬೆದರಿಕೆಗಳು ಬಂದಿವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷನಾಗಿ ಅವರನ್ನು ರಕ್ಷಿಸಬೇಕಾಗಿರುವುದು ನನ್ನ ಕರ್ತವ್ಯ. ಯಾವುದೇ ಬೆದರಿಕೆಗಳಿಗೆ ಜಗ್ಗುವುದಿಲ್ಲ. ಇದರ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಗುಡುಗಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೇ. ೪೦ರಷ್ಟು ಕಮಿಷನ್ ಬಗ್ಗೆ ಪ್ರಧಾನಿ ನರೇಂದ್ರಮೋದಿ ಅವರಿಗೆ ಒಂದು ವರ್ಷದ ಹಿಂದೆ ಪತ್ರ ಬರೆದಿದ್ದರೂ ಕ್ರಮ ಕೈಗೊಂಡಿಲ್ಲ. ೭೫ನೇ ವರ್ಷ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮೋದಿ ಅವರು ತಮ್ಮ ಭಾಷಣದಲ್ಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ ಅಂಶವನ್ನು ಉಲ್ಲೇಖಿಸಿ ಮತ್ತೊಮ್ಮೆ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಕೆಂಪಣ್ಣ ಹೇಳಿದರು.
ಸಚಿವರು, ಶಾಸಕರು ಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿರುವ ಅವರು, ಕೆಲ ಶಾಸಕರು ಭೂಸೇನಾ ನಿಗಮದಿಂದ ಹಣ ಪಡೆದಿದ್ದಾರೆ ಎಂದು ಕಿಡಿಕಾರಿದರು.
ಇದಕ್ಕೂ ಮುನ್ನ ಸರ್ಕಾರಿ ಕಾಮಗಾರಿಗಳಲ್ಲಿ ಶೇ. ೪೦ರಷ್ಟು ಕಮಿಷನ್ ನೀಡುವ ಬಗ್ಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಅವರನ್ನು ಭೇಟಿ ಮಾಡಿ ಭ್ರಷ್ಟಾಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಶೇ. ೪೦ರಷ್ಟು ಕಮಿಷನ್ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಸುವಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿಪಕ್ಷ ನಾಯಕ ಸಿದ್ದರಾಮಯ್ಯರವರಿಗೆ ಮನವಿ ಸಲ್ಲಿಸಿದರು. ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಸಣ್ಣ ನೀರಾವರಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ವಿವಿಧ ಇಲಾಖೆಗಳಲ್ಲಿ ೧೦ ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನದ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮತ್ತು ಬಿಲ್ ಪಾವತಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನೆರೆ ರಾಜ್ಯಗಳ ಗುತ್ತಿಗೆದಾರರನ್ನು ಓಲೈಸುವ ಉದ್ದೇಶದಿಂದ ಪ್ಯಾಕೇಜ್ ಎಂಬ ತಂತ್ರವನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಶಾಹಿ ವರ್ಗ ಕಂಡುಕೊಂಡಿದೆ. ಇದರಿಂದ ರಾಜ್ಯದ ಗುತ್ತಿಗೆದಾರರಿಗೆ ಸಮಸ್ಯೆಯಾಗಿದೆ. ಕೂಡಲೇ ಪ್ಯಾಕೇಜ್ ಪದ್ಧತಿ ರದ್ದುಮಾಡಬೇಕೆಂದು ಒತ್ತಾಯಿಸಿದರು.
ಬಿಬಿಎಂಪಿಯಿಂದ ೨೨ ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಹಣ ಬಿಡುಗಡೆಯಾಗಬೇಕಾಗಿದೆ. ತಕ್ಷಣ ಈ ಹಣ ಬಿಡುಗಡೆ ಮಾಡಬೇಕಂದು ಕೆಂಪಣ್ಣ ಆಗ್ರಹಿಸಿದರು.
ವಿಧಾನಸಭಾ ಚುನಾವಣೆಗೆ ೭-೮ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ೩೦ಕ್ಕೂ ಹೆಚ್ಚು ಸದಸ್ಯರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ವಿವಾದಕ್ಕೆ ಮರುಜೀವ ನೀಡಲು ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಕಾನೂನು ಕ್ರಮದ ಎಚ್ಚರಿಕೆ…
ತಮ್ಮ ವಿರುದ್ಧ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತೋಟಗಾರಿಕಾ ಸಚಿವ ಮುನಿರತ್ನ ಎಚ್ಚರಿಕೆ ನೀಡಿದ್ದಾರೆ.
ತಮ್ಮ ವಿರುದ್ಧ ಮಾಡಿರುವ ಆರೋಪಗಳ ನಡುವೆ ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ದಾಖಲೆಗಳು ನೀಡಬೇಕು ಎಂದು ಹೇಳಿದರು.
ಕೆಂಪಣ್ಣ ಅವರು ಏನು ಬೇಕಾದರು ಆರೋಪ ಮಾಡಲಿ, ಅವರು ಮಾಡಿರುವ ಆರೋಪಗಳಿಗೆ ಸಾಕ್ಷಿ ಮತ್ತು ದಾಖಲೆ ನೀಡಲಿ ಎಂದು ಒತ್ತಾಯಿಸಿದರು.

ಪ್ರಮುಖ ಸುದ್ದಿ :-   ಬಿಜೆಪಿ ವಿರುದ್ಧ 40 ಪರ್ಸೆಂಟ್‌ ಕಮಿಷನ್‌ ಜಾಹೀರಾತು: ಸಿಎಂ ಸಿದ್ದರಾಮಯ್ಯ, ಡಿಸಿಎಂಗೆ ಡಿಕೆಶಿಗೆ ಸಮನ್ಸ್‌ ಮರು ಜಾರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement