ವೀಳ್ಯದೆಲೆ ಸುಣ್ಣದ ಟ್ಯೂಬ್‌ ನಿಷೇಧಿಸಿ ಇಲ್ಲವೇ ಸುರಕ್ಷಿತ ಪ್ಯಾಕ್‌ ಮಾಡಿ ಮಾರಾಟ ಮಾಡಲು ಕ್ರಮ ಕೈಗೊಳ್ಳಿ: ಡಾ.ಶ್ರೀನಿವಾಸ ಜೋಶಿ ಒತ್ತಾಯ

ಹುಬ್ಬಳ್ಳಿ: ವೀಳ್ಯದೆಲೆಗೆ ಬಳಸುವ ಸುಣ್ಣ ಆಕಸ್ಮಿಕವಾಗಿ ಮಕ್ಕಳ ಕಣ್ಣಿಗೆ ತಗುಲಿದರೆ, ಅವರು ಶಾಶ್ವತವಾಗಿ ಅಂಧತ್ವಕ್ಕೆ ಒಳಗಾಗಬಹುದು. ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ, ಹೀಗಾಗಿ ಸುಣ್ಣವನ್ನು ಸುರಕ್ಷಿತವಾಗಿ ಪ್ಯಾಕ್‌ ಮಾಡಿ ಮಾರಾಟ ಮಾಡುವಂತೆ ಮಾಡಬೇಕು ಅಥವಾ ಸರ್ಕಾರ ಈ ತರಹದ ಮಾರಾಟಕ್ಕೆ ನಿಷೇಧ ಹೇರಲು ಸರ್ಕಾರ ಮುಂದಾಗಬೇಕು ಎಂದು ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಒತ್ತಾಯಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಕ್ಷಿತ ಮಾನದಂಡಗಳನ್ನು ಅನುಸರಿಸಿದೆ ಪ್ಲಾಸ್ಟಿಕ್‌ ಟ್ಯೂಬ್‌ ಹಾಗೂ ಚಿಕ್ಕ ಪ್ಲಾಸ್ಟಿಕ್‌ ಬಾಕ್ಸ್‌ನಲ್ಲಿ ಸುಣ್ಣ ತುಂಬಿ ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕ ಮಿಶ್ರಿತವಿರುವ ಆ ಸುಣ್ಣ ಆಕಸ್ಮಿಕವಾಗಿ ಮಕ್ಕಳ ಕೈಗೆ ಸಿಕ್ಕಿ, ಅದು ಅವರ ಕಣ್ಣಿಗೆ ತಾಗಿದರೆ ಕಣ್ಣಿನ ಒಳಭಾಗದ ಕರಿಗುಡ್ಡೆ ಹಾಗೂ ಪದರುಗಳು ಸುಟ್ಟು ಶಾಶ್ವತ ಅಂಧತ್ವಕ್ಕೆ ಕಾರಣವಾಗಬಹುದು. ಅಪಾಯಕಾರಿಯಾದ ಈ ಸುಣ್ಣವನ್ನು ಸುರಕ್ಷಿತವಾಗಿ ಪ್ಯಾಕ್‌ ಮಾಡಿ ಮಾರಾಟ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಅಥವಾ ನಿಷೇಧಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಮುಖ ಸುದ್ದಿ :-   ಮಹಿಳೆ ಅಪಹರಣ ಪ್ರಕರಣ ; ಎಚ್‌.ಡಿ. ರೇವಣ್ಣ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ವಜಾ : ಬಂಧನದ ಭೀತಿ

ತಮ್ಮ ಆಸ್ಪತ್ರೆಗೆ ಬಂದಿದ್ದ ಶಿಶುವಿನ ಪುರಾವೆ ನೀಡಿದ ಅವರು, ಆಟವಾಡುತ್ತಿದ್ದ 11 ತಿಂಗಳ ಮಗುವಿಗೆ ಆಕಸ್ಮಿಕವಾಗಿ ಸುಣ್ಣದ ಟ್ಯೂಬ್‌ನಲ್ಲಿದ್ದ ಸುಣ್ಣ ಕಣ್ಣಿನೊಳಗೆ ಹೋಗಿತ್ತು. ಪಾಲಕರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಮ್ಮ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಅಷ್ಟರಲ್ಲಾಗಲೇ ಮಗುವಿನ ಕರಿಗುಡ್ಡೆ ಸುಟ್ಟು ಹೋಗಿತ್ತು. ಇದೀಗ ಹಂತಹಂತವಾಗಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ ನೀಡಿ ಮಗುವಿಗೆ ಪುನರ್‌ ದೃಷ್ಟಿ ನೀಡಲು ಸಾಧ್ಯವಿದೆಯೇ ಎಂದು ನೋಡುತ್ತಿದ್ದೇವೆ. ಆದರೆ, ಕಳೆದುಕೊಂಡ ದೃಷ್ಟಿ ಮರಳಿ ಬರುವುದು ಕಷ್ಟ ಎಂದು ತಿಳಿಸಿದರು.

ದೇಶದಲ್ಲಿ ಪ್ರತಿವರ್ಷ 90ರಷ್ಟು ದಾಖಲಾದ ಪ್ರಕರಣಗಳಲ್ಲಿ ಶೇ 50ರಷ್ಟು ಪ್ರಕರಣಗಳು ಉತ್ತರ ಕರ್ನಾಟಕ ಭಾಗದಲ್ಲಿ ವರದಿಯಾಗುತ್ತಿದ್ದು, ನಮ್ಮ ಆಸ್ಪತ್ರೆಯಲ್ಲಿ ಈ ವರ್ಷ ಇಂತಹ 10 ಪ್ರಕರಣಗಳ ದಾಖಲಾಗಿವೆ. ಗ್ರಾಮೀಣ ಭಾಗದ ಪೋಷಕರಲ್ಲಿ ತಿಳಿವಳಿಕೆ ಕಡಿಮೆಯಿದ್ದು, ಮಕ್ಕಳ ಕೈಗೆ ಸುಣ್ಣದ ಟ್ಯೂಬ್‌ ಸಿಗುವಂತೆ ಇಡಬಾರದು’ ಎಂದ ಡಾ. ಶ್ರೀನಿವಾಸ ಜೋಶಿ ಮನವಿ ಮಾಡಿದರು.
ಕಣ್ಣಿಗೆ ಸುಣ್ಣ ಬಿದ್ದ ಐದು ನಿಮಿಷದಲ್ಲಿಯೇ ಒಳಭಾಗಗಳು ಬಹುತೇಕ ನಿಷ್ಕ್ರಿಯವಾಗುತ್ತವೆ. ಆದರೂ ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಮುಂದಾಗಬೇಕು. ಅದಕ್ಕೂ ಪೂರ್ವ ಶುದ್ಧ ನೀರಿನಿಂದ ಸಾಧ್ಯವಾದಷ್ಟು ಕಣ್ಣು ತೊಳೆಯುತ್ತಲೇ ಇರಬೇಕು. ಎಂತಹದ್ದೇ ಚಿಕಿತ್ಸೆ ಅಥವಾ ಕಣ್ಣು ಕಸಿ ಮಾಡಿದರೂ ಶುದ್ಧ ದೃಷ್ಟಿ ಬರುವುದು ಅನುಮಾನ ಎಂದು ಡಾ. ಸತ್ಯಮೂರ್ತಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಕೃಷ್ಣಪ್ರಸಾದ, ಡಾ. ಮನೋಹರ, ಡಾ. ರಾಜಶ್ರೀ ಇತರರಿದ್ದರು.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement