
ನವದೆಹಲಿ: ವಕೀಲ ಪ್ರಶಾಂತ್ ಭೂಷಣ್ ಮತ್ತು ತೆಹಲ್ಕಾ ಸಂಸ್ಥಾಪಕ ತರುಣ್ ತೇಜ್‌ಪಾಲ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಕ್ಷಮಾಪಣೆ, ವಿವರಣೆಯನ್ನು ಪರಿಗಣಿಸಿ ಅವರ ವಿರುದ್ಧ 2009ರಲ್ಲಿ ಹೂಡಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕೈಬಿಟ್ಟಿದೆ.
ತೆಹಲ್ಕಾ ನಿಯತಕಾಲಿಕದಲ್ಲಿ ಪ್ರಕಟವಾದ ಸಂದರ್ಶನಕ್ಕೆ ಸಂಬಂಧಿಸಿದಂತೆ ಭೂಷಣ್ ಮತ್ತು ತೇಜ್ಪಾಲ್ ವಿರುದ್ಧ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಪ್ರಕರಣವನ್ನು ದಾಖಲಿಸಿದ್ದಾರೆ, ಸಂದರ್ಶನದಲ್ಲಿ ಭೂಷಣ್ ಅವರು ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಬಗ್ಗೆ ಆರೋಪಗಳನ್ನು ಮಾಡಿದ್ದರು.
ಭೂಷಣ್ ಅವರು ನ್ಯಾಯಾಲಯಕ್ಕೆ ನೀಡಿದ ಹೇಳಿಕೆಯಲ್ಲಿ, “ನಾನು ಸಂಪೂರ್ಣ ನಂಬಿಕೆ ಹೊಂದಿರುವ ನ್ಯಾಯಾಂಗದ ಪ್ರತಿಷ್ಠೆಯನ್ನು ಕಡಿಮೆ ಮಾಡುವ ಉದ್ದೇಶವಿಲ್ಲ” ಎಂದು ಹೇಳಿದ್ದರು.

2009ರಲ್ಲಿ ತೆಹೆಲ್ಕಾಗೆ ನೀಡಿದ ಸಂದರ್ಶನದಲ್ಲಿ ಭ್ರಷ್ಟಾಚಾರ ಎಂಬ ಪದವನ್ನು ಔಚಿತ್ಯದ ಕೊರತೆ ಎಂಬರ್ಥದಲ್ಲಿ ವ್ಯಾಪಕ ಅರ್ಥದಲ್ಲಿ ಬಳಸಿದ್ದೇನೆ. ನಾನು ಕೇವಲ ಹಣಕಾಸಿನ ಭ್ರಷ್ಟಾಚಾರ ಅಥವಾ ಯಾವುದೇ ಹಣದ ಲಾಭವನ್ನು ಪಡೆಯುವುದು ಎಂದರ್ಥದಲ್ಲಿ ಬಳಸಿಲ್ಲ. ನಾನು ಹೇಳಿರುವುದು ಯಾರಿಗಾದರೂ ಅಥವಾ ಅವರ ಕುಟುಂಬಕ್ಕೆ ಯಾವುದೇ ರೀತಿಯಲ್ಲಿ ನೋವುಂಟುಮಾಡಿದ್ದರೆ, ನಾನು ವಿಷಾದಿಸುತ್ತೇನೆ. ನಾನು ನ್ಯಾಯಾಂಗದ ಸಂಸ್ಥೆಯನ್ನು ಮತ್ತು ವಿಶೇಷವಾಗಿ ನಾನು ಭಾಗವಾಗಿರುವ ಸುಪ್ರೀಂ ಕೋರ್ಟ್ ಅನ್ನು ಬೆಂಬಲಿಸುತ್ತೇನೆ ಮತ್ತು ನಾನು ಸಂಪೂರ್ಣ ನಂಬಿಕೆ ಹೊಂದಿರುವ ನ್ಯಾಯಾಂಗದ ಪ್ರತಿಷ್ಠೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ನಾನು ನಿಶ್ಚಿತವಾಗಿ ಹೇಳುತ್ತೇನೆ. …ನನ್ನ ಸಂದರ್ಶನವನ್ನು ತಪ್ಪಾಗಿ ಅರ್ಥೈಸಿಕೊಂಡರೆ ನಾನು ವಿಷಾದಿಸುತ್ತೇನೆ…” ಎಂದು ಅವರು ಹೇಳಿದ್ದರು.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಸೂರ್ಯ ಕಾಂತ್ ಮತ್ತು ಎಂ. ಎಂ. ಸುಂದ್ರೇಶ ಅವರಿದ್ದ ಪೀಠವು ಇಬ್ಬರೂ ಕ್ಷಮೆ ಯಾಚಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ಮುಂದುವೆರಸುವ ಅಗತ್ಯ ಇದೆ ಎಂದು ನಾವು ಭಾವಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು.
ಭೂಷಣ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು, “ಕ್ಷಮೆ ಯಾಚಿಸಿರುವುದರಿಂದ ಪ್ರಕರಣವನ್ನು ಇನ್ನೂ ಮುಂದುವರೆಸುವ ಅಗತ್ಯವಿದೆಯೇ? ಹಾಗೆ ಮಾಡುವುದು ಮತ್ತಷ್ಟು ಗೊಂದಲಗೊಳಿಸಿದಂತೆ ಆಗುತ್ತದೆ ಎಂಬುದು ನನ್ನ ವಾದ” ಎಂದರು. ಪ್ರಕರಣ ಮುಕ್ತಾಯಗೊಳಿಸುವ ಮುನ್ನ ನ್ಯಾಯಾಲಯ ಈ ವಾದವನ್ನು ಒಪ್ಪಿತು.
2009ರಲ್ಲಿ, ತರುಣ್ ತೇಜ್‌ಪಾಲ್ ಸಂಪಾದಕತ್ವದ ತೆಹಲ್ಕಾ ನಿಯತಕಾಲಿಕೆಗೆ ಸಂದರ್ಶನ ನೀಡಿದ್ದ ಪ್ರಶಾಂತ್ ಭೂಷಣ್ ನ್ಯಾಯಾಂಗದ ಭ್ರಷ್ಟಾಚಾರಗಳ ಬಗ್ಗೆ ಆರೋಪಿಸಿದ್ದರು.
2009ರಲ್ಲಿ ಆರಂಭವಾಗಿದ್ದ ಪ್ರಕರಣ 2012ರಲ್ಲಿ ನೆನೆಗುದಿಗೆ ಬಿದ್ದಿತು. 2020 ರಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಪ್ರಕರಣ ಆಲಿಸಲು ನಿರ್ಧರಿಸುತ್ತಿದ್ದಂತೆ ಅದಕ್ಕೆ ಮರುಜೀವ ಬಂದಿತ್ತು.
ಆದರೆ, ನ್ಯಾ. ಮಿಶ್ರಾ ಅವರ ನಿವೃತ್ತಿಯಿಂದಾಗಿ ವಿಚಾರಣೆ ಸಾಧ್ಯವಾಗಿರಲಿಲ್ಲ. ಬಳಿಕ ಪ್ರಕರಣವನ್ನು ಇಂದಿಗೆ ಪಟ್ಟಿ ಮಾಡಲಾಗಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ