ಹಾಲಿನ ದರ  ಹೆಚ್ಚಿಸಲು ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ಕೆಎಂಎಫ್‌

ಬೆಂಗಳೂರು: ಹಾಲಿನ ದರವನ್ನು ಪ್ರತಿ ಲೀಟರ್‌ಗೆ 3 ರೂ.ಗಳಂತೆ ಹೆಚ್ಚಿಸಲು ಕೋರಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ, ಖಾಸಗಿಯಾಗಿ ಹಾಲು ಮಾರಾಟ ಮಾಡುವ ದರಕ್ಕೆ ಹೋಲಿಸಿದರೆ ಕೆಎಂಎಫ್‌ ಹಾಲಿನ ದರ ಕಡಿಮೆಯಿದೆ. ಹೀಗಾಗಿ, ದರ ಹೆಚ್ಚಿಸುವಂತೆ ಕೋರಲಾಗಿದೆ ಎಂದು ತಿಳಿಸಿದರು.
ಖಾಸಗಿ ಬ್ರಾಂಡ್‌ಗಳ (ಉತ್ಪನ್ನಗಳಿಗೆ) ಮಾರಾಟಕ್ಕೆ ಹೋಲಿಕೆ ಮಾಡಿದಾಗ ನಾವು ತೆಗೆದುಕೊಳ್ಳುವ ಬೆಲೆ 5-7 ರೂ. ಕಡಿಮೆ ಇದೆ. ಕೆಎಂಎಫ್‌ ಒಂದು ಲೀಟರ್‌ ಹಾಲನ್ನು 37 ರೂ.ಗಳಿಗೆ ಮಾರಾಟ ಮಾಡುತ್ತಿದೆ. ಖಾಸಗಿಯವರು ₹40 ರೂ.ಗಳಿಗೂ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.ದರ ಹೆಚ್ಚಳದ ಬಗ್ಗೆ ಕೆಎಂಎಫ್‌ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಜೊತೆ ಚರ್ಚಿಸಿದ್ದಾರೆ. ಏರಿಕೆಯಾದ ದರದ ಮೊತ್ತವನ್ನು ರೈತರಿಗೆ ವರ್ಗಾಯಿಸುವುದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮುಂಬೈನಲ್ಲಿ ಪ್ರತಿ ನಿತ್ಯ 2 ಲಕ್ಷ ಲೀಟರ್‌ ಹಾಲು ಮಾರಾಟ ಮಾಡುತ್ತಿದ್ದೇವೆ. ಉತ್ತರ ಭಾರತದ ರಾಜ್ಯಗಳಲ್ಲಿ ಹಾಲು ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ. ಗೋವಾ, ತಮಿಳುನಾಡು ಮತ್ತು ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ 5 ಲಕ್ಷ ಲೀಟರ್‌ ಹಾಲು ಮಾರಾಟ ಮಾಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.
ಸರ್ಕಾರ ಈಗಾಗಲೇ ರೈತರ ಪ್ರೋತ್ಸಾಹ ಧನದ ಎರಡನೇ ಕಂತು ₹1,250 ಕೋಟಿಯನ್ನು ಬಿಡುಗಡೆ ಮಾಡಿದ್ದು, ಮೂರನೇ ಕಂತು ಸಹ ಶೀಘ್ರ ಬಿಡುಗಡೆಯಾಗಲಿದೆ. ನೇರವಾಗಿ ರೈತರ ಖಾತೆಗಳಿಗೆ ಹಣ ವರ್ಗಾವಣೆ ಆಗಲಿದೆ. 2019-20ರ ಬಾಕಿ ಪ್ರೋತ್ಸಾಹ ಧನವನ್ನೂ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಬೈಲಹೊಂಗಲ ಶಾಸಕರ ಕಾರು ಅಪಘಾತ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement