ಮುರುಘಾ ಶರಣರ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಚಿತ್ರದುರ್ಗ: ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಪೋಕ್ಸೊ ಪ್ರಕರಣ ಎದುರಿಸುತ್ತಿರುವ ಮುರುಘಾ ಶರಣರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯ ಶುಕ್ರವಾರಕ್ಕೆ ಮುಂದೂಡಿದೆ.
ನಾಳೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್‌ ಅವಕಾಶ ನೀಡಿದ್ದು, ಈ ಸಂಬಂಧ ಸರ್ಕಾರಿ ಅಭಿಯೋಜಕರಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ಆಗಸ್ಟ್‌ 30ರಂದು ಶ್ರೀಗಳು ಅರ್ಜಿ ಸಲ್ಲಿಸಿದ್ದರು.
ಕೋರ್ಟ್‌ ವಿಚಾರಣೆ ಕುರಿತು ಮಾತನಾಡಿದ ಬಾಲಕಿಯರ ಪರ ವಕೀಲ ಶ್ರೀನಿವಾಸ್, ಮುರುಘಾ ಶರಣರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಗಿದೆ. ನಾಳೆ ಸಂತ್ರಸ್ತ ಬಾಲಕಿಯರ ಪರ ತಕರಾರು ಅರ್ಜಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮುರುಘಾ ಶರಣರು ಯಾವ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪರಿಶೀಲಿಸಿ ನಾಳೆ, ಶುಕ್ರವಾರ ತಕರಾರು ಅರ್ಜಿ ಸಲ್ಲಿಸಲಾಗುವುದು. ಶರಣರ ಜಾಮೀನು ಅರ್ಜಿ ಬಗ್ಗೆ ಸಂತ್ರಸ್ತರಿಗೆ ಮತ್ತು ಪಿಪಿಗೆ ಇಂದು ನೋಟಿಸ್ ಬಂದಿತ್ತು. ಹಾಗಾಗಿ ಇಂದು ತಕರಾರು ಸಲ್ಲಿಸಲು ಅವಕಾಶ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement