ಎಸ್​ಡಿಎಂ ಸಂಸ್ಥೆಯ ಉಪಾಧ್ಯಕ್ಷ, ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ.ವಜ್ರಕುಮಾರ ಇನ್ನಿಲ್ಲ

ಧಾರವಾಡ: ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ, ಎಸ್​ಡಿಎಂ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಡಾ. ನ. ವಜ್ರಕುಮಾರ ಇಂದು, ಶುಕ್ರವಾರ ಬೆಳಗಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕಳೆದ ಹಲವಾರು ತಿಂಗಳಿಂದ‌ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮೂಲತಃ ಉಡುಪಿ ತಾಲೂಕು ಯರ್ಮಾಳ ಗ್ರಾಮದವರಾಗಿದ್ದ ಅವರು 1973ರಲ್ಲಿ ಧಾರವಾಡಕ್ಕೆ ಆಗಮಿಸಿದ್ದರು. ಧಾರವಾಡ ಯಾಲಕ್ಕಿ ಶೆಟ್ಟರ ಕಾಲೋನಿ ನಿವಾಸಿಯಾಗಿದ್ದರು. ತಮ್ಮ ಕೊನೆಯ ಕ್ಷಣಗಳವರೆಗೂ ಎಸ್​ಡಿಎಂ ಸಂಸ್ಥೆ ಅಭಿವೃದ್ಧಿಗೆ ಶ್ರಮಿಸಿದ್ದರು.
ಪ್ರಾಥಮಿಕ ಶಿಕ್ಷಣ ಉಡುಪಿ ತಾಲೂಕಿನ ಮುಲ್ಕಿಯಲ್ಲಿ, ಪ್ರೌಢ ಶಿಕ್ಷಣವನ್ನು ಕಲ್ಯಾಣಪುರದ ಮಿಲ್ಲಿಗ್ರಿಸ್ ಹೈಸ್ಕೂಲನಲ್ಲಿ ಪೂರೈಸಿದ ಅವರು, ಉಡುಪಿಯ ಮಹಾತ್ಮಾಗಾಂಧಿ ಮೆಮೊರಿಯಲ್ ಕಾಲೇಜಿನಲ್ಲಿ ಪದವಿ ಹಾಗೂ ಸೊಲ್ಲಾಪುರದ ದಯಾನಂದ ಕಾಲೇಜಿನಲ್ಲಿ ಸ್ನಾತಕೋತ್ತರ ಶಿಕ್ಷಣ ಮುಗಿಸಿದ್ದರು.

1962ರಿಂದ 1973ರ ವರೆಗೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿದ್ದರು. ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ರೀಡರ್ ಆಗಿ 1973ರಲ್ಲಿ ಆಗಮಿಸಿದರು. ನಂತರ ಉಪಪ್ರಾಚಾರ್ಯ, ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಜೆಎಸ್‌ಎಸ್ ಮತ್ತು ಎಸ್​ಡಿಎಂ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ ಅವರು, ಎರಡು ಸಂಸ್ಥೆಗಳ ಬೆಳವಣಿಗೆಯಲ್ಲಿ ತಮ್ಮ ಅಪಾರ ಕೊಡುಗೆ ನೀಡಿದ್ದರು.25 ವರ್ಷಗಳ ಕಾಲ ಜೆ.ಎಸ್.ಎಸ್ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, ಸ್ನಾತಕೋತ್ತರ ಪದವಿ, ಪಿ.ಎಚ್.ಡಿ ಯವರೆಗೆ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ 50 ವರ್ಷದ ಹೊಸ್ತಿಲಲ್ಲಿರುವಾಗ ಅವರು ಅಗಲಿದ್ದಾರೆ.

ಅಲ್ಲದೆ, ಅಖಿಲ ಭಾರತ ಭಾರತೀಯ ಜೈನ್ ಮಿಲನ್ ಉಪಾಧ್ಯಕ್ಷರಾಗಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರಾಗಿ, ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಸಲಹಾ ಸಮಿತಿಯ ಸದಸ್ಯರು, ಹುಬ್ಬಳ್ಳಿಯಲ್ಲಿ 1990ರಲ್ಲಿ ಜರುಗಿದ 59ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ, ಆಕಾಶವಾಣಿ ಧಾರವಾಡ ಕೇಂದ್ರದ ಸಲಹಾ ಸಮಿತಿ ಸದಸ್ಯರು, ಕರ್ನಾಟಕ ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್‌ ಸದಸ್ಯರು, ರಾಜ್ಯ ಸರ್ಕಾರದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಗಳ ಟಾಸ್ಟ್‌ ಫೋರ್ಸ್‌ ಸಮಿತಿ ಸದಸ್ಯರಾಗಿ ಅವರ ಕೊಡುಗೆ ಗಣನೀಯವಾಗಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ವಜ್ರಕುಮಾರ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ನಾಗರಿಕರಿಂದ ೧೯೯೮ರಲ್ಲಿ ನಾಗರಿಕ ಸನ್ಮಾನ ಅಭಿನಂದನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ನಾಗರಿಕರಿಂದ ಅರ್ಪಣೆಗೊಂಡ ೩.೫ ಲಕ್ಷ ರೂ.ಗಳನ್ನು ಹಣವನ್ನು ಹಮ್ಮಿಣಿಯಾಗಿ ಅರ್ಪಿಸಲಾಯಿತು. ಈ ಹಣವನ್ನು ಠೇವಣಿಯಾಗಿ
ಬ್ಯಾಂಕಿನಲ್ಲಿ ಇಟ್ಟು ಬಂದ ಬಡ್ಡಿಯ ಹಣವನ್ನು ಪ್ರತಿವರ್ಷ ಆದರ್ಶ ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ‘ಡಾ. ನ. ವಜ್ರಕುಮಾರ ಪ್ರಶಸ್ತಿಯನ್ನು ೨೦೧೮ರಿಂದ ನೀಡಲಾಗುತ್ತಿದ್ದು, ಇದು ೫೦,೦೦೦ ರೂ.ಗಳು ಪ್ರಶಸ್ತಿ ಹಾಗೂ ಫಲಕಗಳನ್ನೊಳಗೊಂಡಿದೆ.

ಕಳೆದ 50 ವರ್ಷಗಳಿಂದ ಧಾರವಾಡಕ್ಕೆ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನೀಡಿದ ಧೀಮಂತ ಶಿಕ್ಷಣತಜ್ಞ ಡಾ. ನ. ವಜ್ರಕುಮಾರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಜೆ.ಎಸ್.ಎಸ್ ಹಾಗೂ ಎಸ್.ಡಿ.ಎಂ ಸಂಸ್ಥೆಗಳನ್ನು ಕಟ್ಟಿ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮುನ್ನುಡಿ ಬರೆದಿದ್ದಾರೆ.
ಮೃತರ ಅಂತಿಮ ದರ್ಶನಕ್ಕೆ ಜೆಎಸ್‌ಎಸ್ ಕ್ಯಾಂಪಸ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿವಿಧ ಗಣ್ಯರು ಮಾತ್ರವಲ್ಲದೇ ಸಂಸ್ಥೆಗಳ ಪದಾಧಿಕಾರಿಗಳು, ಸಿಬ್ಬಂದಿ ಅಂತಿಮ ದರ್ಶನ ಪಡೆದರು. ಅವರ ಅಂತಿಮ ಸಂಸ್ಕಾರ ಹುಟ್ಟುರಾದ ಉಡುಪಿ ಜಿಲ್ಲೆಯ ಯರ್ಮಾಳು ಗ್ರಾಮದಲ್ಲಿ ನೆರವೇರಲಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಸಿಎಂ ಬೊಮ್ಮಾಯಿ ಸಂತಾಪ..

ಧಾರವಾಡ ಜನತಾ ಶಿಕ್ಷಣ ಸಮಿತಿ ಕಾರ್ಯದರ್ಶಿ ವಜ್ರಕುಮಾರ ನಿಧನಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಧಾರವಾಡ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು, ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಡಾ. ವಜ್ರಕುಮಾರ ನಿಧನರಾದ ವಿಷಯ ತಿಳಿದು ದುಃಖಿತನಾಗಿದ್ದೇನೆ.ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

 

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement